ಬಂಗಾರಪೇಟೆ ತಾಲೂಕು ಕಚೇರಿ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಭೇಟಿ ನೀಡಿ, ಮನವಿ ಸ್ವೀಕರಿಸಿದರು. ಅಧ್ಯಕ್ಷ ಬಿ.ವಿ.ಸುರೇಶ್​ ಕುಮಾರ್​, ಉಪಾಧ್ಯಕ್ಷ ಅಮರೇಶ್​, ಅಧಿಕಾರಿಗಳಾದ ವಿನಯ್​ ಕುಮಾರ್​, ಅವಿನಾಶ್​ ಸುಜಾತಾ, ಶ್ವೇತಾ, ಅಂಜಲಿ, ಚೇತನ್​ ಕುಮಾರ್​, ರವಿ, ಚೇತನ್​, ಯೋಗೇಶ್​, ವಿನೋದ್​, ಮಾನಸ, ನಂದಿನಿ, ಮಧು ,ಲಾವಣ್ಯಾ, ಗಣೇಶ್​, ಜಗನ್ನಾಥ್​, ಲೋಹಿತ್​ ಇದ್ದರು. 
ಜಿಲ್ಲೆ

ವಿಎಗಳ ಬೇಡಿಕೆ ಈಡೇರಿಕೆಗೆ ಅಧಿವೇಶನದಲ್ಲಿ ಪ್ರಸ್ತಾವ

ಗ್ರಾಮ ಆಡಳಿತ ಅಧಿಕಾರಿಗಳಿಗೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಭರವಸೆ

ಬಂಗಾರಪೇಟೆ: ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ಕುರಿತು ಮಾ.3ರಿಂದ ನಡೆಯಲಿರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.

ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಬಂಗಾರಪೇಟೆ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿಕಾರಿಗಳು ಹಮ್ಮಿಕೊಂಡಿದ್ದ ಮುಷ್ಕರ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ತಾಲೂಕುಮಟ್ಟದಲ್ಲಿ ಎರಡನೇ ಹಂತದ ಮುಷ್ಕರ ಹಮ್ಮಿಕೊಂಡಿರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ರಾಜ್ಯಮಟ್ಟದ ಪದಾಧಿಕಾರಿಗಳನ್ನು ಕರೆಸಿ, ಯಾವ ಬೇಡಿಕೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂಬುದನ್ನು ಪರಿಶೀಲಿಸಿ, ಕ್ರಮವಹಿಸಬೇಕು ಎಂದು ಶಾಸಕರು ಮನವಿ ಮಾಡಿದರು.

ಸರ್ಕಾರವು ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಬಹಳಷ್ಟಿದೆ. ಗ್ರಾಮಮಟ್ಟದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಮುಷ್ಕರ ಹೆಸರಿನಲ್ಲಿ ಕೆಲಸವನ್ನು ಸ್ಥಗಿತಗೊಳಿಸಿರುವುದರಿಂದ ರೈತರಿಗೆ, ಬಡವರಿಗೆ ಮತ್ತು ಕೂಲಿಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಸಾರ್ವಜನಿಕರಿಗೆ ಬೇಕಾಗಿರುವ ವಿವಿಧ ಪ್ರಮಾಣ ಪತ್ರಗಳನ್ನು ಪಡೆಯಲು ಅಧಿಕಾರಿಗಳು ಬೇಕೇಬೇಕು. ಆದ್ದರಿಂದ ಮುಷ್ಕರವನ್ನು ಸ್ಥಗಿತಗೊಳಿಸಿ ಕೆಲಸಗಳಿಗೆ ತೆರಳುವ ಮೂಲಕ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.