ನರೇಗಲ್ಲ: ಸಮೀಪದ ಕೋಟುಮುಚಗಿ ಗ್ರಾಮದ ಆದರ್ಶ ಶಿಕ್ಷಕ ದೇವಪ್ಪ ಬಸಪ್ಪ ತಳವಾರ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಗದುಗಿನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನದ ವಾಗ್ದಾನ ಪತ್ರ ಬರೆದುಕೊಟ್ಟಿದ್ದಾರೆ.
ಗದಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥರಿಗೆ ಜೂ. 22ರಂದು ಡಿ.ಬಿ. ತಳವಾರ ದಂಪತಿ ದೇಹದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಪತಿಯ ನಿರ್ಧಾರಕ್ಕೆ ಅವರ ಪತ್ನಿ ವಿಜಯಲಕ್ಷ್ಮಿಯವರು ಸ್ವಯಂಪ್ರೇರಿತರಾಗಿ ಸಮ್ಮತಿಸಿದ್ದಾರೆ.
ಈ ನಿರ್ಧಾರಕ್ಕೆ ಅವರ ಇಬ್ಬರು ಪುತ್ರರು ಸಹಮತ ವ್ಯಕ್ತಪಡಿಸಿದ್ದಾರೆ. ಶಿಕ್ಷಕ ತಳವಾರ ಅವರು ಮುಂಡಗೋಡ ತಾಲೂಕಿನ ಬೆಡಸಗಾಂವ, ಮುಂಡರಗಿ ತಾಲೂಕಿನ ಮುರಡಿ, ರೋಣ ತಾಲೂಕಿನ ಜಕ್ಕಲಿ, ಬಾಚಲಾಪುರ, ಹೊಸಹಳ್ಳಿ, ಚಿಕ್ಕಮಣ್ಣೂರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಕೊನೆಗೆ ತಮ್ಮ ತವರೂರಾದ ಕೋಟುಮುಚಗಿಯ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಜೂ. 30ರಂದು ನಿವೃತ್ತರಾಗಿದ್ದಾರೆ.