ಜಿಲ್ಲೆ

ಎಸ್​ಟಿಪಿ ಉನ್ನತಿಕರಣಕ್ಕೆ ಆದ್ಯತೆ ನೀಡಿ ಪರಿಷ್ಕೃತ ಡಿಪಿಆರ್​ ಸಲ್ಲಿಕೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ನಗರಸಭೆಯ ಒಳಚರಂಡಿ ವ್ಯವಸ್ಥೆ ಆಧುನೀಕರಣಕ್ಕೆ ಕೇಂದ್ರ ಸರ್ಕಾರ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ತಯಾರಿಸಿರುವ ಡಿಪಿಆರ್​ನಲ್ಲಿ ಕೆಲವು ಬದಲಾವಣೆಯೊಂದಿಗೆ ಪ್ರಸ್ತುತ ಇರುವ ವೆಟ್​ ವೆಲ್​ಗಳು ಹಾಗೂ ಎಸ್​ಟಿಪಿ ಉನ್ನತಿಕರಣಕ್ಕೆ ಆದ್ಯತೆ ನೀಡಿ ಪರಿಷ್ಕೃತ ವರದಿ ತಯಾರಿಸುವಂತೆ ಶಾಸಕ ಯಶ್​ಪಾಲ್​ ಸುವರ್ಣ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಉಡುಪಿ ನಗರಸಭೆಯಿಂದ ಒಳಚರಂಡಿ ಯೋಜನೆ ಬಗ್ಗೆ ಕುಡ್ಸೆಂಪ್​ ತಯಾರಿಸಿರುವ ಯೋಜನಾ ವರದಿ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು. ನಿಟ್ಟೂರಿನಲ್ಲಿರುವ ಎಸ್ಟಿಪಿಯನ್ನು ಮೇಲ್ದರ್ಜೆಗೇರಿಸಬೇಕು. 4 ವೆಟ್ವೆಲ್​ಗಳಲ್ಲಿರುವ ಪಂಪ್ಗಳನ್ನು ಬದಲಾಯಿಸಬೇಕು. ಶುದ್ಧೀಕರಣ ಟಕಗಳಿಗೆ ಹೊಸ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕು. 2055ರವರೆಗೆ ನಗರದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ಅನುಷ್ಠಾನಗೊಳಿಸಬೇಕು. ಈ ಬಗ್ಗೆ ನಗರಸಭಾ ಅಧಿಕಾರಿಗಳೊಂದಿಗೆ ಹಾಗೂ ಸದಸ್ಯರೊಂದಿಗೆ ವಿಸತ ಚರ್ಚೆ ನಡೆಸಿ ಡಿಪಿಆರ್​ ಅಂತಿಮಗೊಳಿಸಬೇಕು ಎಂದು ಶಾಸಕರು ಸೂಚಿಸಿದರು.

ಖಾಸಗಿ ಸಂಸ್ಥೆಯ ಇಂಜಿನಿಯರ್​ ಚೇತನ್​ ಕುಮಾರ್​ ಮಾತನಾಡಿ, ಪ್ರಸ್ತುತ 12 ವಾರ್ಡ್​ಗಳ ಚರಂಡಿ ನೀರು 19 ಎಂಎಲ್ಡಿ ಸಾಮಾರ್ಥ್ಯದ ನಿಟ್ಟೂರು ಎಸ್ಟಿಪಿಗೆ ಸರಬರಾಜಾಗುತ್ತಿದ್ದು, ಇದನ್ನು ಉನ್ನತಿಕರಿಸುವ ಜೊತೆಗೆ ಹೊಸದಾಗಿ 8 ಎಂಎಲ್ಡಿ ಸಾಮಾರ್ಥ್ಯದ ಎಸ್​ ಟಿ ಪಿ ನಿರ್ಮಿಸಲಾಗುವುದು. ಕೇಂದ್ರ ಹಸಿರು ನ್ಯಾಯಾಧೀಕರಣದ ನಿರ್ದೇಶನದಂತೆ ತ್ಯಾಜ್ಯ ನೀರು ಶುದ್ಧೀಕರಿಸಲಾಗುತ್ತಿದ್ದು, ಈ ನೀರನ್ನು ಕಾರ್ಖಾನೆಗಳಿಗೆ, ತೋಟಗಳಿಗೆ ಬಳಸಬಹುದಾಗಿದೆ. 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಸುಮಿತ್ರಾ ನಾಯಕ್​, ಪೌರಾಯುಕ್ತ ರಾಯಪ್ಪ, ಇಂಜಿನಿಯರ್​ ದುರ್ಗಾಪ್ರಸಾದ್​, ಪರಿಸರ ಇಂಜಿನಿಯರ್​ ಸ್ನೇಹಾ ಮೊದಲಾದವರು ಉಪಸ್ಥಿತರಿದ್ದರು.