ಹರಪನಹಳ್ಳಿ: ಗರ್ಭಗುಡಿ ಪಿಕಪ್ ಬ್ರಿಡ್ಜ್ ಕಮ್ ಬ್ಯಾರೇಜ್ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದಿಂದ ಉಪ ತಹಸೀಲ್ದಾರ್ ನಟರಾಜ ಹಾಗೂ ತಾಪಂ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣ ಅವರಿಗೆ ಐಬಿ ವೃತ್ತದಲ್ಲಿ ಸೋಮವಾರ ಮನವಿ ಸಲ್ಲಿಸಲಾಯಿತು.
ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ ಮಾತನಾಡಿ, ಬ್ಯಾರೇಜ್ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷದಿಂದ ವಿಳಂಬವಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ದಿ.ನಿಜಲಿಂಗಪ್ಪ ಅವರ ಕನಸಿನ ಕೂಸಾದ ಈ ಯೋಜನೆ ಹಲವು ಜನ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದರೂ ಪ್ರಾರಂಭವಾಗದಿರುವುದು ವಿಪರ್ಯಾಸ. ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕೇಳಿದರೆ ಬಿಲ್ ಪಾವತಿ ತುಂಬಾ ನಿಧಾನವಾಗುತ್ತಿದೆ. ವರ್ಷಗಳು ಕಳೆದಂತೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎನ್ನುವ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ 60 ಕೆರೆಗಳ ತುಂಬಿಸಿ, ರೈತರ ಬಾಳು ಹಸನಾಗಿಸುವ ಈ ಯೋಜನೆ ಮುಗಿದರೆ ಬೇಸಿಗೆ ಸಮೀಪಿಸುತ್ತಿದ್ದಂತೆ ಮತ್ತೊಂದು ಬೆಳೆ ಬೆಳೆದುಕೊಳ್ಳಲು ಸಹಕಾರಿಯಾಗುತ್ತದೆ. ಸರ್ಕಾರ ಗುತ್ತಿಗೆದಾರರಿಗೆ ಬರಬೇಕಾದ ಹಣ ಬಿಡುಗಡೆಗೊಳಿಸಿ ಕೆಲಸ ಪೂರ್ಣಗೊಳಿಸಲು ಅನುವು ಮಾಡಿಕೊಡಬೇಕು. ಇದಕ್ಕೆ ಶಾಸಕರು ಸೇರಿ ಸ್ಥಳೀಯ ನಾಯಕರು ಎಚ್ಚೆತ್ತುಕೊಂಡು ಸರ್ಕಾರಕ್ಕೆ ಒತ್ತಡ ಹೇರಬೇಕು. ಯೋಜನೆಯಿಂದ ರಾಣೆಬೆನ್ನೂರು ಮತ್ತು ಹರಪನಹಳ್ಳಿಗೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಲು ಸಹಕಾರಿಯಾಗುತ್ತದೆ ಎಂದರು.
ಸಭಾ ಮುಖಂಡ ಬಳಿಗನೂರು ಕೊಟ್ರೇಶ ಮಾತನಾಡಿ, ಈ ಯೋಜನೆಯಿಂದ ಎರಡೂ ತಾಲೂಕಿನ 4,600 ಹೆಕ್ಟೇರ್ ಭೂಮಿಗೆ ಅನುಕೂಲವಾಗಲಿದ್ದು, ರೈತರಿಗೆ ಶಾಶ್ವತ ನೀರಾವರಿ ಒದಗಿಸಿದಂತಾಗುತ್ತದೆ. ಅಷ್ಟೇ ಅಲ್ಲದೆ ಈ ಯೋಜನೆಯಿಂದ 19ಕಿ.ಮೀ ವ್ಯಾಪ್ತಿಯಲ್ಲಿ 50ದಶಲಕ್ಷ ಘನ ಅಡಿಯಷ್ಟು ನೀರು ಸಂಗ್ರಹಣೆಯಾಗುತ್ತದೆ. ನೀರು ನಿಲ್ಲುವುದರಿಂದ ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗುತ್ತದೆ. 132 ಗ್ರಾಮಗಳಿಗೆ ನೀರು ಸರಬರಾಜು ಮಾಡಬಹುದು. ಇಂತಹ ಮಹತ್ವದ ಯೋಜನೆಯನ್ನು ಸರ್ಕಾರ ಮತ್ತು ಸ್ಥಳೀಯ ರಾಜಕಾರಣಿಗಳು ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತ ಗೊಳಿಸಿಕೊಂಡು ಜನರಿಗೆ ತಣ್ಣೀರು ಎರಚುತ್ತಿರುವುದು ದುರಂತ ಎಂದರು.