ಜಿಲ್ಲೆ

ಏರ್‌ಪೋಟ್‌ಗೆ ಬಂತು ಖಾಸಗಿ ವಿಮಾನ

Shivamogga - Desk - Praveena Kumar S

ಶಿವಮೊಗ್ಗ: ಜಿಲ್ಲೆಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಶಿವಮೊಗ್ಗ ಏರ್‌ಪೋರ್ಟ್ ಆರಂಭದ ಮರುದಿನವೇ ಖಾಸಗಿ ಲಘು ವಿಮಾನವೊಂದು ಆಗಮಿಸಿರುವುದರಿಂದ ವಿಮಾನಯಾನಕ್ಕೆ ಹೊಸ ಸ್ವರೂಪ ಸಿಕ್ಕಂತಾಗಿದೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟಿಸಿದ ಆರು ತಿಂಗಳ ಬಳಿಕ ಆ.31ರಂದು ಅಧಿಕೃತವಾಗಿ ವಿಮಾನ ಸಂಚಾರ ಆರಂಭವಾಗಿದೆ. ಅದರ ಮರುದಿನವೇ ಉದ್ಯಮಿಯೊಬ್ಬರು ಖಾಸಗಿ ಲಘು ವಿಮಾನದಲ್ಲಿ ಬೆಂಗಳೂರಿನಿಂದ ಶಿವಮೊಗ್ಗ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಎರಡು ತಾಸಿನ ಬಳಿಕ ಆ ವಿಮಾನ ಮೈಸೂರಿಗೆ ತೆರಳಿದೆ. ಇದರೊಂದಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಮಾತ್ರವಲ್ಲದೇ ಬೇರೆ ಖಾಸಗಿ ಕಂಪನಿಗಳ ವಿಮಾನ ಹಾರಾಟಕ್ಕೂ ಅವಕಾಶ ಸಿಕ್ಕಂತಾಗಿದೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಶಿವಮೊಗ್ಗ ಏರ್‌ಪೋರ್ಟ್‌ಗೆ ವ್ಯಾಪಕ ಬೇಡಿಕೆ ಬಂದಿತ್ತು. ಬಿಜೆಪಿ, ಕಾಂಗ್ರೆಸ್ ನಾಯಕರು ಏರ್‌ಪೋರ್ಟ್ ಬಳಸಿಕೊಂಡು ಹೆಚ್ಚು ಪ್ರಚಾರ ಸಭೆಗಳನ್ನು ನಡೆಸಲು ಅನುಕೂಲವಾಗಿತ್ತು. ಈಗ ಅಧಿಕೃತವಾಗಿ ವಿಮಾನ ಹಾರಾಟ ಆರಂಭವಾದ ಬಳಿಕ ಅವಕಾಶಗಳು ಹೆಚ್ಚುತ್ತಿವೆ.