ಜಿಲ್ಲೆ

ಸಾಮೆ ಬೆಳೆದು ಸಿರಿಧಾನ್ಯ ಸೊಬಗಿಗೆ ಮುನ್ನುಡಿ

ನಿವೃತ್ತ ಕೆಎಎಸ್​ ಅಧಿಕಾರಿ ಹನುಮಂತಪ್ಪ ಸಾಧನೆ - ಸಾಂಪ್ರದಾಯಿಕ ಕೃಷಿಯತ್ತ ಮರಳಿದ ರೈತ

ಮಡಿವಾಳ: ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಬೆಳೆಗಳಾಗಿ ಹಲವು ಬೆಳೆಗಳನ್ನು ಕಾಣಬಹುದಾಗಿದೆ. ಜತೆಗೆ ದಿನನಿತ್ಯ ಬಳಸುವ ತರಕಾರಿಗಳನ್ನು ರಾಜ್ಯದುದ್ದಗಲಕ್ಕೂ ಕೃಷಿಕರು ಬೆಳೆಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ರೈತ ಸಾಂಪ್ರದಾಯಿಕ ಬೆಳೆಯಾದ ಸಾಮೆ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.


ಶ್ರೀನಿವಾಸಪುರ ತಾಲೂಕು ಮಡಿವಾಳ ಹೋಬಳಿಯ ಅಬ್ಬೇನಹಳ್ಳಿ ವಲಯದ ಕಣಿವೆನಹಳ್ಳಿಯ ಕೆಎಎಸ್​ ನಿವೃತ್ತ ಅಧಿಕಾರಿ, ರೈತ ಎಸ್​. ಹನುಮಂತಪ್ಪ ಅವರು ಅಪರೂಪದ ಸಿರಿಧಾನ್ಯವಾದ ಸಾಮೆ ಬೆಳೆಯನ್ನು ಸಮೃದ್ಧಿಯಾಗಿ ಬೆಳೆಯುವ ಮೂಲಕ ಹಿರಿಯರು ಬೆಳೆಯುತ್ತಿದ್ದ ಸಾಂಪ್ರದಾಯಿಕ ಬಳೆಗೆ ಮರುಜೀವ ನೀಡುವ ಮೂಲಕ ಹೊಸ ಮುನ್ನುಡಿ ಬರೆದಿದ್ದಾರೆ.


ಜಿಲ್ಲೆಯು ಹೆಚ್ಚಾಗಿ ಟೊಮ್ಯಾಟೊ ಬೆಳೆಗೆ ಪ್ರಸಿದ್ಧಿ ಪಡೆದಿದ್ದು, ದೇಶ&ವಿದೇಶಗಳಿಗೆ ಟೊಮ್ಯಾಟೊ ಸರಬರಾಜು ಆಗುತ್ತಿರುವ ಮಧ್ಯೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಮಧುರಾಜ್​ ಅವರ ಮಾರ್ಗದರ್ಶನದಿಂದ ಸಿರಿಧಾನ್ಯ ಬಿತ್ತನೆ ಬೀಜ ಪಡೆದು ಸಾಂಪ್ರದಾಯಕವಾಗಿ ಬಿತ್ತನೆ ಮಾಡಿದ್ದಾರೆ.


ಸಾಮೆ ಕೇವಲ ಮೂರು ತಿಂಗಳಿಗೆ 5 ಅಡಿ ಎತ್ತರ ಸಮೃದ್ಧವಾಗಿ ಬೆಳೆದು ತೆನೆ ಕಟಾವಿಗೆ ಬಂದಿದೆ. 8 ಎಕರೆಯಲ್ಲಿ 2 ಎಕರೆ ಸಾಮೆ ಬೆಳೆಯಲಾಗಿದೆ. ಸಾವಯವ ಪದ್ಧತಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಸಿರಿಧಾನ್ಯ ಬೆಳೆದಿದ್ದು, ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಪೌಷ್ಟಿಕಾಂಶದ ಕೊರತೆ ನೀಗಿಸುತ್ತದೆ. ಬಿಪಿ ಮತ್ತು ಶುಗರ್​ನಂತಹ ಸಮಸ್ಯೆಯನ್ನು ಹತೋಟಿಯಲ್ಲಿಡಲು ಈ ಸಿರಿಧಾನ್ಯ ಪೂರಕವಾಗಿದೆ ಎಂದು ವೈದ್ಯಕಿಯ ಲೋಕವೇ ಹೇಳುತ್ತದೆ.


ವಾಣಿಜ್ಯ ಬೆಳೆಗಳ ಮಧ್ಯೆ ಮರೆಯಾಗಿದ್ದ ಬೆಳೆ ಮತ್ತೆ ಚಿಗುರೊಡೆಯತೊಡಗಿದ್ದು, ಹಿಂದೆಂದಿಗಿಂತಲೂ ಈಗ ಈ ಸಿರಿಧಾನ್ಯಕ್ಕೆ ಬೆಲೆ ಹೆಚ್ಚು ಎಂದು ರೈತ ಹನುಮಂತಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.


"8 ಎಕರೆಯಲ್ಲಿ ರಾಗಿ ಮತ್ತು ತೋಟಗಾರಿಕೆ ಬೆಳೆಗಳಾದ ಸೀಬೆ, ಸಪೋಟ, ಮಾವು, ಚಕ್ಕೊತ, ನಿಂಬೆ, ಹಲಸಿನ ಹಣ್ಣು ಬೆಳೆದಿದ್ದೇನೆ. ತೋಟದಲ್ಲಿ ಬೆಳೆದಿರುವ ಹಣ್ಣು ಹಂಪಲುಗಳನ್ನು ಸುತ್ತಮುತ್ತಲೂ ನೂರಾರು ಜಾತಿಯ ಪ್ರಾಣಿ& ಪಗಳು ತಿನ್ನುತ್ತವೆ. ಜಮೀನಿಗೆ ಬರುವ ಎಲ್ಲರಿಗೂ ಹಣ್ಣುಗಳನ್ನು ಉಚಿತವಾಗಿ ತಿನ್ನಲು ನೀಡುತ್ತಿದ್ದೇನೆ. ಹಣ್ಣುಗಳು ತುಂಬ ರುಚಿಕರವಾಗಿರುತ್ತವೆ."
 - ಹನುಮಂತಪ್ಪ, ರೈತ