ದೊಡ್ಡಬಳ್ಳಾಪುರ : ನಗರದ ತಾಯಿ&ಮಗು ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ 9 ತಿಂಗಳ ಗರ್ಭಿಣಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇನ್ನಷ್ಟೇ ಪ್ರಪಂಚವನ್ನು ನೋಡಬೇಕಿದ್ದ ಮಗು ಕೂಡ ತಾಯಿಯ ಗರ್ಭದಲ್ಲಿಯೇ ಕೊನೆಯುಸಿರೆಳೆದಿದೆ. ನಗರದ ಬಸವೇಶ್ವರ ನಗರದ ನಿವಾಸಿ ಸುಷ್ಮಾ (30) ಹೊಟ್ಟೆಯಲ್ಲಿದ್ದ ಮಗುವಿನೊಂದಿಗೆ ಮೃತಪಟ್ಟಾಕೆ.
ಸುಷ್ಮಾಗೆ ಇದು ಮೊದಲ ಮಗುವಾಗಿದ್ದು, ಮನೆಯಲ್ಲಿ ಹೊಸ ಅತಿಥಿ ಆಗಮನ ಆಗುತ್ತದೆ ಎಂದು ಕುಟುಂಬಸ್ಥರು ಖುಷಿಯಿಂದ ಕಾಯುತ್ತಿದ್ದರು. ಆದರೆ ದೊಡ್ಡಬಳ್ಳಾಪುರ ತಾಯಿ&ಮಗು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಎರಡು ಜೀವಗಳನ್ನು ಬಲಿ ಪಡೆದಿದೆ. ಕುಟುಂಬಸ್ಥರ ಆಕ್ರಂದನ ಆಸ್ಪತ್ರೆ ಆವರಣದಲ್ಲಿ ಮುಗಿಲು ಮುಟ್ಟಿತ್ತು. ಸುಷ್ಮಾ ಅವರನ್ನು ಬೆಂಗಳೂರಿನ ಮಹೇಶ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಚೊಚ್ಚಲ ಹೆರಿಗೆಗಾಗಿ ತವರು ಮನೆಗೆ ಬಂದಿದ್ದಳು. ದೊಡ್ಡಬಳ್ಳಾಪುರದ ತಾಯಿ&ಮಗು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸುತ್ತಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮಂಗಳವಾರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪರೀೆ ಮಾಡಿದ ವೈದ್ಯರು ಕೇವಲ ಒಂದು ಬಿಪಿ ಮಾತ್ರೆ ಕೊಟ್ಟು ಏನೂ ಆಗುವುದಿಲ್ಲ, ಮನೆಗೆ ಹೋಗಿ ಎಂದು ಕಳಿಸಿದ್ದಾರೆ. ನನಗೆ ನೋವು ತಡೆಯಲಾಗುತ್ತಿಲ್ಲ ಎಂದು ಬೇಡಿಕೊಂಡರೂ ವೈದ್ಯರು, ನೋವು ತಡೆದುಕೊಳ್ಳಿ, ಬೇಗ ಕಡಿಮೆ ಆಗುತ್ತದೆ ಎಂದು ಹೇಳಿ ಕಳಿಸಿದ್ದರು. ಆದರೆ, ನೋವಿನಿಂದ ಬಳಲುತ್ತಿದ್ದ ಸುಷ್ಮಾ ಅವರನ್ನು ಬುಧವಾರ ಬೆಳಗ್ಗೆ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮಗಳು ಮತ್ತು ಹೊಟ್ಟೆಯಲ್ಲಿದ್ದ ಮಗು ಸಾವಿಗೆ ಕಾರಣ ಎಂದು ತಾಯಿ ಭಾಗ್ಯಮ್ಮ ಕಣ್ಣೀರು ಹಾಕಿದರು.
ಆಶಾ ಕಾರ್ಯಕರ್ತೆ ಪ್ರೇಮಾ ಕುಮಾರಿ ಮಾತನಾಡಿ, ಮಂಗಳವಾರ ಆಸ್ಪತ್ರೆಗೆ ಬಂದಾಗ ಬಿಪಿ ಹೆಚ್ಚಾಗಿದೆ ಎಂದು ವೈದ್ಯರು ಬಿಪಿ ಮಾತ್ರೆ ಕೊಟ್ಟು ಸುಷ್ಮಾಳನ್ನು ಮನೆಗೆ ಕಳಿಸಿದ್ದರು. ಆದರೆ ಬುಧವಾರ ಬೆಳಗ್ಗೆ ಹೀಗಾಗಿದೆ ಎಂದರು. ಸ್ಥಳಿಯ ಮುನಿಮಾರೇಗೌಡ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದೇ ಅನಾಹುತಕ್ಕೆ ಕಾರಣವಾಗಿದೆ. ಬಡವರು ಮಾತ್ರ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರ ಜೀವಕ್ಕೆ ಬೆಲೆ ಇಲ್ಲವೇ? ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಇರುವುದು ನೋವಿನ ಸಂಗತಿ. ತಾಯಿ ಮಗುವಿನ ಸಾವಿಗೆ ಆಸ್ಪತ್ರೆಯ ಅವ್ಯವಸ್ಥೆಯೇ ಕಾರಣ ಎಂದು ಅಕ್ರೋಶ ವ್ಯಕ್ತಪಡಿಸಿದರು. ಪೋಷಕರು, ಕುಟುಂಬಸ್ಥರ ಪ್ರತಿಭಟನೆ, ಆಕ್ರಂದನ ಮುಗಿಲು ಮುಟ್ಟುತ್ತಿದ್ದಂತೆ ಜಿಲ್ಲಾಧಿಕಾರಿ ಬಸವರಾಜು, ಜಿಲ್ಲಾ ಆರೋಗ್ಯಾಧಿಕಾರಿ ಕೃಷ್ಣಾಲಕ್ಕ ರೆಡ್ಡಿ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕುಟುಂಬಸ್ಥರೊಂದಿಗೆ ಮಾತನಾಡಿದರು. ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ತಿಳಿಸಿದ್ದಾರೆ. ಸಂಜೆ ಅಂತ್ಯಕ್ರಿಯೆ: ಸಾಸಲು ಹೋಬಳಿಯ ಸೀಗೆಹಳ್ಳಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆದಿದೆ.
ಮಂಗಳವಾರ ಆಸ್ಪತ್ರೆಗೆ ಬಂದಾಗ ಡಾ.ಹರೀಶ್ ಚಿಕಿತ್ಸೆ ನೀಡಿ ಕಳಿಸಿದ್ದಾರೆ. ಬುಧವಾರ ಬೆಳಗ್ಗೆ 5 ಗಂಟೆಗೆ ಆಸ್ಪತ್ರೆಗೆ ಬಂದಾಗ ಡಾ.ಶರ್ಮಿಳಾ ಹೆಗ್ಡೆ ಚಿಕಿತ್ಸೆಗೆ ಮುಂದಾಗಿದ್ದಾರೆ. ಈ ವೇಳೆ ಆಕೆ ಮೃತಪಟ್ಟಿರುವುದು ಕಂಡು ಬಂದಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. > ಕೃಷ್ಣಾಲಕ್ಕಾರೆಡ್ಡಿ ಜಿಲ್ಲಾ ಆರೋಗ್ಯಾಧಿಕಾರಿ