ಮೈಸೂರು: ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಕಪಿಲಾ ನದಿ ನೀರಲ್ಲಿ ಮುಳುಗಿಸಿ ಕೊಂದ ಅಮಾನವೀಯ ಘಟನೆ ನಂಜನಗೂಡಿನಲ್ಲಿ ಸಂಭವಿಸಿದೆ.
ನಂಜನಗೂಡು ತಾಲೂಕು ಮುದ್ದಹಳ್ಳಿಯ ರಾಜೇಶ್ ಪತ್ನಿ ದೇವಿ(28) ಕೊಲೆಯಾದ ದುರ್ದೈವಿ. ಈಕೆ ಗಂಡ ರಾಜೇಶ್ ಕೊಲೆ ಆರೋಪಿ. ನಂಜನಗೂಡು ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪ ಕಪಿಲಾ ನದಿಗೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ತಳ್ಳಿ ಸಾಯಿಸಲು ರಾಜೇಶ್ ಯತ್ನಿಸಿದ್ದು, ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಕಸುವಿನಹಳ್ಳಿ ಗ್ರಾಮ ದೇವಿಗೆ ರಾಜೇಶ್ ಜತೆ ಆರೇಳು ವರ್ಷದ ಹಿಂದೆ ಮದುವೆ ಆಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದರು. 5 ತಿಂಗಳ ಗರ್ಭಿಣಿಯಾಗಿದ್ದ ದೇವಿಯನ್ನು ಸ್ಕ್ಯಾನಿಂಗ್ ಸೆಂಟರ್ಗೆಂದು ಮುದ್ದಹಳ್ಳಿ ಗ್ರಾಮದಿಂದ ನಂಜನಗೂಡು ಪಟ್ಟಣಕ್ಕೆ ರಾಜೇಶ್ ಕರೆತಂದಿದ್ದ. ಜತೆಗೆ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಬಂದಿದ್ದ. ಸಮೀಪದ ದೇವಾಲಯಕ್ಕೆ ಹೋಗೋಣ ಬಾ ಎಂದು ಕರೆದೊಯ್ದ ರಾಜೇಶ್, ಪತ್ನಿಯನ್ನು ನೀರಿಗೆ ತಳ್ಳಿ ಕೊಂದಿದ್ದಾನೆ. ಇಬ್ಬರು ಮಕ್ಕಳನ್ನೂ ನದಿಯಲ್ಲಿ ಮುಳುಗಿಸಿ ಸಾಯಿಸಲು ಮುಂದಾದ ವೇಳೆ ಮೀನುಗಾರರು ಕೂಡಲೇ ಆ ಮಕ್ಕಳನ್ನು ರಕ್ಷಿಸಿದ್ದಾರೆ.
ಆರೋಪಿ ರಾಜೇಶ್ನನ್ನು ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಹೊಟ್ಟೆಯಲ್ಲಿದ್ದ ಮಗುವಿನ ಮೂಮೆಂಟ್ಗಳನ್ನು ಕಣ್ತುಂಬಿಕೊಳ್ಳಬೇಕಿದ್ದವ ಇಡೀ ಕುಟುಂಬವನ್ನೇ ಕೊಲ್ಲಲು ಸಂಚು ರೂಪಿಸಿದ್ದ. ಆದರೆ, ಕೊಲೆಗೆ ಕಾರಣ ಏನೆಂದು ತಿಳಿದುಬಂದಿಲ್ಲ.