ಕೊಳ್ಳೇಗಾಲ: ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹರಳೆ, ಸತ್ತೇಗಾಲ, ಯಡಕುರಿಯ, ಶಿವನ ಸಮುದ್ರ, ವೆಸ್ಲಿ ಸೇತುವೆ, ಬಿರುಕು ಬಿದ್ದ ಹಳೇ ಸೇತುವೆ ಸ್ಥಳಕ್ಕೆ ಶನಿವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ವಾಸ್ತವ ಪರಿಸ್ಥಿತಿಯನ್ನು ಡಿಸಿ ವೀಕ್ಷಣೆ ಮಾಡಿದರು. ಅಲ್ಲದೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಹಾಗೂ ನದಿ ಬಳಿ ಸಾರ್ವಜನಿಕರು ತೆರಳದಂತೆ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಬಿನಿ, ಕೆಆರ್‌ಎಸ್ ಹಾಗೂ ಸುವರ್ಣಾವತಿ ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನದಿಗೆ ನೀರು ಬಿಡುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸಂಭವಿಸಬಹುದು. ಹಿಂದೆ, ಪ್ರವಾಹ ಸಂಭವಿಸಿ ರುವ ಕುರಿತು ಮಾಹಿತಿ ಪಡೆಯಲಾಗಿದ್ದು, ಕೊಳ್ಳೇಗಾಲದ 10 ಹಾಗೂ ಯಳಂದೂರು ತಾಲೂಕಿನ 6 ಗ್ರಾಮಗಳನ್ನು ಗುರುತಿಸಲಾಗಿದೆ. ಮೈಸೂರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಿಗಾವಹಿಸಲಾಗಿದೆ. ಸದ್ಯ ಸುವರ್ಣಾವತಿ ನದಿಯಿಂದ ಸಮಸ್ಯೆಯಿಲ್ಲ. ಕಬಿನಿಯಿಂದ ನದಿಗೆ ನೀರು ಹರಿಬಿಡಲಾಗಿದೆ. ಅಂತೆಯೇ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಇನ್ನೆರಡು ದಿನದಲ್ಲಿ ನೀರು ಬಿಡಲು ವ್ಯವಸ್ಥೆ ಆಗುತ್ತಿದೆ ಎಂದು ಡಿಸಿ ಶಿಲ್ಪಾನಾಗ್ ತಿಳಿಸಿದರು.
ನದಿ ಪಾತ್ರದ ಜನರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಾಹಣಾ ಸಮಿತಿ ಪ್ರವಾಹ ಆಗದಂತೆ ಮುನ್ನೆಚರಿಕೆ ವಹಿಸಿದೆ. ದಾಸನಪುರದಲ್ಲಿ ತಗ್ಗು ಪ್ರದೇಶ ಇರುವುದರಿಂದ ವಿಶೇಷ ಕಾಳಜಿ ವಹಿಸಲಾಗಿದೆ. ಜನ ಮತ್ತು ಜಾನುವಾರುಗಳಿಗೆ ಹಾನಿ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ನದಿಪಾತ್ರದ ಗ್ರಾಮಗಳಲ್ಲಿರುವ 15 ಸಾವಿರ ಜನರಿಗೆ 25 ಕಾಳಜಿ ಕೇಂದ್ರ ತೆರೆಯಲಾಗುವುದು. ಜತೆಗೆ 3 ಸಾವಿರ ಜಾನುವಾರುಗಳಿಗೆ 2 ಪ್ರಾಣಿ ಕಾಳಜಿ ಕೇಂದ್ರ ಸಿದ್ಧವಾಗಿದೆ ಎಂದರು.
ಶಾಶ್ವತ ಪರಿಹಾರಕ್ಕೆ ಕ್ರಮ: ನದಿ ಪಾತ್ರ ಗ್ರಾಮಗಳ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಬ್ಯಾರಿಯರ್ಸ್, ತಡೆಗೋಡೆ, ಫ್ಲೆಡ್ ಹೋಲ್ ಇತರ ಕೆಲಸವನ್ನು ನರೇಗಾದಡಿ ಮಾಡಲಾಗಿದೆ. ಅಲ್ಲದೆ ವೈಜ್ಞಾನಿಕ ಹಾಗೂ ಗುಣಮಟ್ಟದಿಂದ ಕಾಮಗಾರಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯ ಹಳೇ ಹಂಪಾಪುರ, ಮುಳ್ಳೂರಿನ ಕೆಲ ಕಡೆ ತಡೆಗೋಡೆ ಕೆಲಸ ಆಗಿದೆ ಎಂದು ಡಿಸಿ ತಿಳಿಸಿದರು.
ಜಿಪಂ ಸಿಇಒ ಮೋನಾ ರೋಹಟ್, ಉಪ ವಿಭಾಗಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ, ಸಿಪಿಐ ಕೃಷ್ಣಪ್ಪ, ಕಬಿನಿ ಎಇಇ ರಮೇಶ್, ರಾಮಕೃಷ್ಣ ಮತ್ತಿತರರಿದ್ದರು.