ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಆಚರಿಸಲು ಉದ್ದೇಶಿಸಿರುವ ಬೇಲ್ ನಮ್ಮೆಯ ಪೂರ್ವಭಾವಿ ಸಭೆ ಬೊಳ್ಳುಮಾಡು ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಊರಿನವರ ಉಪಸ್ಥಿತಿಯಲ್ಲಿ ಬೊಳ್ಳುಮಾಡು ವಿ.ಎಸ್.ಎಸ್.ಎನ್ ಕಟ್ಟಡದಲ್ಲಿ ಇತ್ತೀಚೆಗೆ ನಡೆಸಲಾಯಿತು.
ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯನವರ ಅಧ್ಯಕ್ಷತೆಯ ಸಭೆಯಲ್ಲಿ ವಿ.ಎಸ್.ಎಸ್.ಎನ್ ಅಧ್ಯಕ್ಷ ಹಾಗೂ ಗ್ರಾಮಸ್ಥರು, ಕೃಷಿಕರಾದ ಮಾತಂಡ ಬೇಬ ಪೂವಯ್ಯ ಮಾತನಾಡಿ, ಬೊಳ್ಳುಮಾಡು ಮಾತಂಡ ಕುಟುಂಬದ ಗದ್ದೆಯಲ್ಲಿ ಬೇಲ್ ನಮ್ಮೆ ಆಯೋಜಿಸಲಾಗಿದೆ. ಮಾತಂಡ ಕುಟುಂಬಸ್ಥರು, ಬೊಳ್ಳುಮಾಡು ಗ್ರಾಮಸ್ಥರು ಹಾಗೂ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರ ತನು-ಮನದ ಸಹಾಯ-ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ರಾಜ್ಯ ಕೃಷಿ ಸಚಿವರನ್ನು, ಸಂಸದ ಯದುವೀರ್ ಒಡೆಯರ್, ಜಿಲ್ಲಾ ಉಸ್ತುವಾರಿ ಮಂತ್ರಿ ಬೋಸರಾಜು, ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಸೇರಿದಂತೆ ಇಲಾಖಾ ಅಧಿಕಾರಿಗಳನ್ನು ಆಹ್ವಾನಿಸಲಾಗುವುದು. ಬೇಲ್ ನಮ್ಮೆಯನ್ನು ನಿಜವಾದ ನಮ್ಮೆಯ ಅರ್ಥದಲ್ಲಿ ನಡೆಸುವುದರೊಟ್ಟಿಗೆ ಸರ್ಕಾರವು ರೈತರ ಸಂಕಷ್ಟ, ಸರ್ಕಾರದ ವತಿಯಿಂದ ಮಾಡಬಹುದಾದ ಸಹಾಯ-ಸಹಕಾರದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ನಾಟಿ ಓಟವನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿದ್ದು, ಪುರುಷರು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲಿ ನಡೆಯಲಿದೆ. ಹಗ್ಗ ಜಗ್ಗಾಟದಲ್ಲಿ ಪುರುಷರು, ಮಹಿಳೆಯರ ಎರಡು ವಿಭಾಗದಲ್ಲಿ ನಡೆಯಲಿದ್ದು, ತಲಾ ೭ ಸಾವಿರ, ೫ ಸಾವಿರ ಮೊತ್ತದ ನಗದು ಬಹುಮಾನ, ಅಕಾಡೆಮಿ ವತಿಯಿಂದ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಲಾಗುವುದು ಎಂದು ತಿಳಿಸಿದರು.
ಬೇಲ್ ನಮ್ಮೆಯನ್ನು ಕೊಡವಾಮೆಯ ಪ್ರತೀಕವಾಗಿ ನಡೆಸಲು ಸಭೆ ತೀರ್ಮಾನಿಸಿತು. ಸಭೆಯಲ್ಲಿ ಸ್ವಾಗತ ಸಮಿತಿ, ಊಟೋಪಚಾರ ಸಮಿತಿ, ಪ್ರಚಾರ ಸಮಿತಿ, ಆಟೋಟ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಲಾಯಿತು.
ಸಭೆಯಲ್ಲಿ ಬೇಲ್ ನಮ್ಮೆಗೆ ಗದ್ದೆಯ ಮಾಲೀಕರಾದ ಮಾತಂಡ ಶಕು ಅಕ್ಕಮ್ಮ, ಸೋದರ ಮನು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಟ್ಟಕಾಳಂಡ ಕಾಮುಣಿ ಸುರೇಶ್, ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಬಡಕಡ ದೀನಾ ಪೂವಯ್ಯ, ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ, ಚೆಪ್ಪುಡಿರ ಉತ್ತಪ್ಪ, ನಾಯಂದಿರ ಶಿವಾಜಿ, ಮೊಳ್ಳೆಕುಟ್ಟಡ ದಿನು ಬೋಜಪ್ಪ ಸೇರಿದಂತೆ ಇತರರಿದ್ದರು.