ಹೊಳೆನರಸೀಪುರ: ವಾರದಿಂದ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಪಟ್ಟಣದ ಬಹುತೇಕ ರಸ್ತೆಗಳು ಗುಂಡಿ ಬಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಮಳೆ ಆರಂಭಕ್ಕೂ ಮೊದಲು ಪುರಸಭೆ ಗುಂಡಿಗಳಿಗೆ ಮಣ್ಣು ಸುರಿದು ಮುಚ್ಚಿತ್ತು. ಆದರೆ, ಸದ್ಯ ಮಳೆ ಹೆಚ್ಚಾಗಿ ಸುರಿಯುತ್ತಿರುವುದರಿಂದ ಮಣ್ಣು ಕೊಚ್ಚಿ ಹೋಗಿ, ಮೊಣಕಾಲು ಉದ್ದದ ಗುಂಡಿಗಳು ದರ್ಶನವಾಗುತ್ತಿದ್ದು, ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಬಸ್ ನಿಲ್ದಾಣದಿಂದ ಹಾಸನಕ್ಕೆ ತೆರಳುವ ರಸ್ತೆ ತಿರುವಿನಲ್ಲಿ ದೊಡ್ಡ ಪ್ರಮಾಣದ ಗುಂಡಿಗಳಾಗಿ ತೊಂದರೆ ಉಂಟಾಗಿದೆ. ಇದೇ ತಿರುವಿನಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ತೆರಳಲು ಹರಸಾಹಸ ಪಡಬೇಕಾಗಿದೆ.
ಕೋಳಿ ಅಂಗಡಿ ವಾಣಿಜ್ಯ ಸಂಕೀರ್ಣದ ಮುಂಭಾಗ, ಪುರಸಭೆ ಮುಂಭಾಗ, ಕಾರಂಜಿ ಕಟ್ಟೆ ರಸ್ತೆ, ಬಿ.ಎಂ. ರಸ್ತೆ, ಹೌಸಿಂಗ್ ಬೋರ್ಡ್ ರಸ್ತೆ, ಇನ್ನಿತರ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಂಡಿ ಬಿದ್ದಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.