ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ರಚಿಸಿರುವ ಪೋಸ್ಟ್​ಕಾರ್ಡ್​ ಹಾಡು. 
ಜಿಲ್ಲೆ

ಉಡುಪಿ ಜಿಲ್ಲೆಯ ಉಸ್ತುವಾರಿ ಲಕ್ಷ್ಮೀ ಬಾರಮ್ಮ…!

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ | ಆಗಮಿಸದ ಸಚಿವೆ ವಿರುದ್ಧ ವ್ಯಂಗ್ಯ

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾಗ್ಯದ ಲಕ್ಷ್ಮೀ ಬಾರಮ್ಮ… ಎಂಬ ಖ್ಯಾತ ಭಕ್ತೀಗಿತೆಯನ್ನೇ ತುಸು ಬದಲಿಸಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕುರಿತು ಪೋಸ್ಟ್​ಕಾರ್ಡ್​ ಹಾಡು ರಚಿಸಿದ್ದು, ಭಾರಿ ವೈರಲ್​ ಆಗತೊಡಗಿದೆ.

ಉಡುಪಿಯಲ್ಲಿ ನಿರಂತರ ಮಳೆಯಿಂದಾಗಿ ನೆರೆ ಬಂದು ಜನರು ತೀವ್ರ ಸಂಕಷ್ಟ ಅನುಭವಿಸಿದ್ದರೂ ಸಹ ಇತ್ತ ಸುಳಿಯದ ಸಚಿವೆಯ ವರ್ತನೆ ಖಂಡಿಸಿ, ಪೋಸ್ಟ್​ಕಾರ್ಡ್​​ನಲ್ಲಿ ವ್ಯಂಗ್ಯ ಹಾಡು ಸಿದ್ಧಪಡಿಸಲಾಗಿದೆ. ಇದನ್ನು ತಯಾರಿಸಿದ್ದು ಯಾರು ಎಂದು ತಿಳಿಯದಾಗಿದ್ದು, ಓದಿದವರಿಗಂತೂ ಮನರಂಜನೆ ಲಭಿಸುತ್ತಿದೆ.

ತಿಂಗಳಿಂದ ಇಲ್ಲ ಭೇಟಿ

ಮಳೆಗಾಲ ಆರಂಭವಾಗುತ್ತಿದ್ದಂತೆ ಜೂ.12ರಂದು ಉಡುಪಿಗೆ ಭೇಟಿ ನೀಡಿದ್ದ ಸಚಿವೆ ಹೆಬ್ಬಾಳ್ಕರ್​, ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನ ಜಾನುವಾರುಗಳ ಸಾವು-ನೋವು, ಆಸ್ತಿಪಾಸ್ತಿ ಹಾನಿ ಆಗದಂತೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಗರ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ, ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿ ತೆರಳಿದ್ದರು. ಬಳಿಕ ಉಡುಪಿಗೆ ಅವರು ಭೇಟಿ ನೀಡಲಿಲ್ಲ.

ಕೈ ಕಾರ್ಯಕರ್ತರಲ್ಲಿ ಅಸಮಾಧಾನ?

ಸಮರ್ಪಕವಾಗಿ ಜಿಲ್ಲೆಗೆ ಆಗಮಿಸದ ಉಸ್ತುವಾರಿ ಸಚಿವೆ ವಿರುದ್ಧ ಜಿಲ್ಲೆಯ ಕಾಂಗ್ರೆಸ್​ ಕಾರ್ಯಕರ್ತರಲ್ಲೂ ಅಸಮಾಧಾನ ಮೂಡಿದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್​ಗೆ ಸಮರ್ಪಕ ನಾಯಕತ್ವವಿಲ್ಲ. ಒಬ್ಬರೂ ಸಹ ಕಾಂಗ್ರೆಸ್​ನ ಶಾಸಕರಿಲ್ಲ. ರಾಜ್ಯದಲ್ಲಿ ಸರ್ಕಾರ ತಮ್ಮದೇ ಇದ್ದರೂ ಸಹ ಜನರ ವಿಶ್ವಾಸ ಗಳಿಸಲು ಹರಸಾಹಸ ಪಡುವ ಸ್ಥಿತಿ ಜಿಲ್ಲೆಯ ನಾಯಕರಲ್ಲಿದೆ. ಪಕ್ಷ ಸಂಘಟನೆ ಮತ್ತು ಆಡಳಿತದಲ್ಲಿ ಸಚಿವೆ ಲಕ್ಷ್ಮೀ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ವಪಕ್ಷೀಯರೇ ಮೂರ್ನಾಲ್ಕು ತಿಂಗಳ ಹಿಂದೆ ಪರೋಕ್ಷವಾಗಿ ಗುಸು ಗುಸು ಮಾತನಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಕೆಲವರು ಆಕ್ರೋಶ ಹೊರಹಾಕಿದ್ದರು.

ಶನಿವಾರ ಭೇಟಿ?

ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಸಾರ್ವಜನಿಕರೂ ಸಹ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ಜನ ತೀವ್ರ ಸಂಕಷ್ಟದಲ್ಲಿದ್ದಾಗಲೂ ಸಾಂತ್ವನ ಹೇಳಲು ಬಾರದ ಸಚಿವೆಯ ವರ್ತನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಎಲ್ಲ ಬೆಳವಣಿಗೆಯ ನಡುವೆ ಜು.13ರಂದು (ಶನಿವಾರ) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಉಡುಪಿಗೆ ಆಗಮಿಸುತ್ತಿರುವುದಾಗಿ ಖಚಿತ ಮಾಹಿತಿ ಲಭಿಸಿದೆ.

ಪೋಸ್ಟ್​ಕಾರ್ಡ್​ನಲ್ಲಿರುವ ಹಾಡಿನ ಸಾಲುಗಳು

ಉಸ್ತುವಾರಿ ಲಕ್ಷ್ಮೀ ಬಾರಮ್ಮ… ನಮ್ಮಯ ಉಡುಪಿಯ ಉಸ್ತುವಾರಿ ಲಕ್ಷ್ಮೀ ಬಾರಮ್ಮ… ನಮ್ಮಯ ಜಿಲ್ಲೆಗೆ ನೆರೆಯು ಬಂದಿಹುದು ನೋಡಲು ಬಾರಮ್ಮ… ಮಲೇರಿಯಾ, ಡೇಂ ಬಂದಿಹುದಂತೆ, ಕಾಲುಸಂಕಗಳು ಮುರಿದಿವೆಯಂತೆ, ಬೆಳೆಗಳು ಕೊಚ್ಚಿ ಹೋಗಿವೆಯಂತೆ, ನಿನಗೆ ಮಾತ್ರ ಇಲ್ಲ ಚಿಂತೆ, ಉಸ್ತುವಾರಿ ಸ್ವಲ್ಪ ಕೇಳಮ್ಮ, ಫ್ರೀ ಬಸ್ಸಲಿ ಬಂದು ಉಡುಪಿಯ ಕಷ್ಟ ನೋಡಮ್ಮ, ಉಸ್ತುವಾರಿ ಲಕ್ಷ್ಮೀ ಬಾರಮ್ಮ.. ನಮ್ಮಯ ಉಡುಪಿಯ ಉಸ್ತುವಾರೀ ಲಕ್ಷ್ಮೀ ಬಾರಮ್ಮ…

ಕಾಂಗ್ರೆಸ್​ ಸರ್ಕಾರ ರಚನೆಯಾಗಿ ಒಂದು ವರ್ಷದ ಒಂದು ತಿಂಗಳಾಗಿದ್ದು, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಈವರೆಗೆ ಒಮ್ಮೆ ಮಾತ್ರ ಕೆಡಿಪಿ ಸಭೆ ಮಾಡಿದ್ದಾರೆ. ನಮ್ಮ ಜಿಲ್ಲೆಗ ಅವರ 'ದರ್ಶನ ಭಾಗ್ಯ' ಆಗುತ್ತಿಲ್ಲ. ಉಡುಪಿ ಪರ್ಯಾಯಕ್ಕೆ 10 ಕೋಟಿ ರೂ. ಅನುದಾನ, ಜಿಲ್ಲೆಯಲ್ಲಿ ಕಡಲ ಕೊರೆತಕ್ಕೆ 5 ಕೋಟಿ ರೂ. ಕೊಡುವುದಾಗಿ ಹೇಳಿದ್ದರು. ಇನ್ನೂ ಆ ಅನುದಾನ ಬಂದಿಲ್ಲ. ಉಡುಪಿಗೆ ಇನ್ನು ಯಾವಾಗ ಬರುತ್ತಾರೋ ತಿಳಿದಿಲ್ಲ. ಬರುವಾಗ ಭರವಸೆ ನೀಡಿದ್ದ ಅನುದಾಗಳ ಆದೇಶದ ಪತ್ರವನ್ನಾದರೂ ಜತೆಯಲ್ಲೇ ತನ್ನಿ. ಯಶ್​ಪಾಲ್​ ಸುವರ್ಣ. ಶಾಸಕ, ಉಡುಪಿ
ಕೆಲವೊಂದು ಅನಿವಾರ್ಯ ಕಾರಣದಿಂದ ಸಚಿವೆ ಲಕ್ಷ್ಮೀ ಅವರಿಗೆ ಜಿಲ್ಲೆಯ ಭೇಟಿ ಸಾಧ್ಯವಾಗುತ್ತಿಲ್ಲ. ಕಳೆದ ತಿಂಗಳು ಉಡುಪಿಯಲ್ಲಿ ಕೆಡಿಪಿ ಸಭೆ ಮಾಡಿದ್ದಾರೆ. ನಿರಂತರವಾಗಿ ಉಡುಪಿ ಜಿಲ್ಲೆಯ ನಾಯಕರು, ಪದಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಸಂಪುಟ ದರ್ಜೆ ಸಚಿವರೂ ಆಗಿದ್ದು, ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಯ ಮಹತ್ತರ ಹೊಣೆ ಅವರ ಮೇಲಿದೆ. ಅವರಿಗೆ ಅತಿಯಾದ ಕಾರ್ಯದ ಒತ್ತಡವೂ ಇದ್ದು ಶೀಘ್ರದಲ್ಲೇ ಉಡುಪಿಗೆ ಆಗಮಿಸಿ ನಾಯಕರು, ಕಾರ್ಯಕರ್ತರ ಜತೆ ಸಭೆ ನಡೆಸಲಿದ್ದಾರೆ. ಅಶೋಕಕುಮಾರ್​ ಕೊಡವೂರು. ಜಿಲ್ಲಾಧ್ಯಕ್ಷ. ಉಡುಪಿ ಕಾಂಗ್ರೆಸ್​