ನರೇಗಲ್ಲ: ನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಸಾಂಪ್ರದಾಯಿಕ ಕಲೆಗಳು ನಶಿಸುತ್ತಿರುವ ಕಾಲಘಟ್ಟದಲ್ಲಿ ಯುವಕರು ಮುಂದೆ ಬಂದು ಜಾನಪದ ಕಲೆಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆಧುನಿಕತೆಯ ಭರಾಟೆಯ ಮಧ್ಯೆದಲ್ಲೂ ಜಾನಪದ ಕಲೆಯೊಂದನ್ನುಉಳಿಸಿ ಬೆಳೆಸುವ ಕಾರ್ಯವಾಗುತ್ತಿದೆ.
ನರೇಗಲ್ಲನಲ್ಲಿ ಮಾತ್ರ ಪ್ರದರ್ಶನಗೊಳ್ಳುವ ವಿಶಿಷ್ಟ ಜಾನಪದ ಪ್ರಕಾರಗಳಲ್ಲೊಂದಾದ ಕಡಬಡ ಸೋಗು (ಜಾನಪದ ಶೈಲಿಯ ಆಟ)ವನ್ನು ಶ್ರಾವಣಮಾಸದ ಮಂಗಳವಾರ ಮತ್ತು ಶುಕ್ರವಾರದಂದು ಪ್ರದರ್ಶಿಸಲಾಗುತ್ತದೆ. ಕೆಲವು ದಿನಗಳ ಹಿಂದೆ ಸ್ನೇಹಜೀವಿ ಗೆಳೆಯರ ಬಳಗ ಸಂತೆ ಬಜಾರದ ಯುವಕರು ಹಮ್ಮಿಕೊಂಡ ಕಡಬಡ ಸೋಗು ಜನಮನ ಸೂರೆಗೊಂಡಿತು. ಪಟ್ಟಣದ ಹಳೇ ಬಜಾರದ ಹನುಮಂತನ ದೇವಸ್ಥಾನದಿಂದ ಪ್ರಾರಂಭವಾದ ಕಡಬಡಸೋಗಿನ ಮೆರವಣಿಗೆ, ವೀರಣ್ಣನ ಪಾದಗಟ್ಟಿ, ದರ್ಗಾ, ಮಾರೆಮ್ಮನ ದೇವಸ್ಥಾನ, ಹಳೇ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್, ಹೊಸ ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ, ಗ್ರಾಮದೇವತಾ ದೇವಸ್ಥಾನ, ಗಜಾನನ ದೇವಸ್ಥಾನದ ಮೂಲಕ ಮರಳಿ ಸ್ವಸ್ಥಾನ ತಲುಪಿತು.
ದೇವಿ ಮತ್ತು ರಾಕ್ಷಸರ ನಡುವಿನ ಹೋರಾಟವನ್ನು ಕಡಬಡ ಸೋಗು ಎನ್ನಲಾಗುತ್ತದೆ. ಮುಂದೆ ಇಬ್ಬರು ರಾಕ್ಷಸರು ದೇವಿಯ ಮೇಲೆ ಆಕ್ರಮಣ ಮಾಡಲು ಹವಣಿಸುತ್ತಿರುತ್ತಾರೆ, ದೇವಿ ರಾಕ್ಷಸರನ್ನು ಸಂಹರಿಸಲು ಯತ್ನಿಸುತ್ತಿರುತ್ತಾಳೆ. ಇದೇ ಈ ಆಟದ ತಿರುಳು. ಈ ಸೋಗಿನ ಆಟದಲ್ಲಿ 20 ರಿಂದ 40 ವೇಷಧಾರಿಗಳಿರುತ್ತಾರೆ. ದೇವಿ, ಬ್ರಹ್ಮ, ವಿಷ್ಣು, ಮಹೇಶ್ವರ, ದೇವೇಂದ್ರ, ರಂಭೆ, ಐರ್ವಶಿ, ಮೇನಕೆ, ರಾಕ್ಷಸರು, ಯಮಧರ್ಮ, ಹನುಮಂತ ಹೀಗೆ ಹತ್ತು ಹಲವು ಪೌರಾಣಿಕ ಪಾತ್ರಗಳು ಮರುಜೀವ ಪಡೆದಿರುತ್ತವೆ. ದೇವಿಯು ಕುಣಿತ ಹಾಕುತ್ತ ಮುಂದೆ ಸಾಗುತ್ತಿದ್ದರೆ ಅವಳ ಮೇಲೆ ಆಕ್ರಮಣ ಮಾಡಲು ರಾಕ್ಷಸರು ಕಾಯುತ್ತಿರುತ್ತಾರೆ. ದೇವಿ ರಾಕ್ಷಸರನ್ನು ಸಂಹಾರ ಮಾಡಲು ಬಂದಾಗ ಆಡುವ ಆಟವನ್ನು ನೋಡುವುದೇ ಬಲು ಸೊಗಸು.
ಕಡಬಡ ಸೋಗು ಪುರಾತನ ಹಾಗೂ ಜಾನಪದದ ವಿಶೇಷ ಕಲೆಯಾಗಿದೆ. ಕಡಬಡ ಸೋಗು ಹಾಕುವುದರಿಂದ ಸಮೃದ್ಧ ಮಳೆ- ಬೆಳೆ, ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂಬ ನಂಬಿಕೆ ಹಿರಿಯರಲ್ಲಿತ್ತು. ಆದ್ದರಿಂದ, ನಾವು ಈ ಪುರಾತನ ಸಂಸ್ಕೃತಿ-ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.-ಚನ್ನಬಸಪ್ಪ ಜೋಳದ, ವಿರೂಪಾಕ್ಷಪ್ಪ ಬಾರಕೇರ, ಹಿರಿಯರು.