ಜಿಲ್ಲೆ

125 ಕಿಮೀಗೊಂದು ಪಾಲಿಟ್ರಾಮಾ ಕೇಂದ್ರ

* ಸಂಸದ ಡಾ.ಸಿ.ಎನ್​. ಮಂಜುನಾಥ್​ ಮಾಹಿತಿ

* ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಸಂಸದ ಕಚೇರಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ರಾಮನಗರ

ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚಿರುವ ಕಾರಣ ಅವಡ ಸಂಭವಿಸಿದ ತಕ್ಷಣವೇ ಚಿಕಿತ್ಸೆ ದೊರೆಯುವಂತೆ ಮಾಡಲು ಪ್ರತಿ 125 ಕಿಮೀಗೆ ಒಂದರಂತೆ ಪಾಲಿಟ್ರಾಮಾ ಕೇಂದ್ರ ಸ್ಥಾಪನೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಸಂಸದ ಡಾ.ಸಿ.ಎನ್​. ಮಂಜುನಾಥ್​ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಭಾನುವಾರ ಸಂಸದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಕ್ಯಾನ್ಸರ್​ನಿಂದ ಶೇ.8 ಮಂದಿ ಸಾಯುತ್ತಿದ್ದರೆ, ಅಪಘಾತದಿಂದ ಶೇ.13 ಮಂದಿ ಅಸುನೀಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕೆ ಮನವಿ ಮಾಡಲಾಗಿದೆ ಎಂದರು. ಬ್ರೆಸ್ಟ್​ ಕ್ಯಾನ್ಸರ್​ಅನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಪಾರಾಗಬಹುದು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಸ್ಪತ್ರೆ ಮೋನೋಗ್ರಫಿ ಕೇಂದ್ರ ಆರಂಭಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು. ಇದಕ್ಕಾಗಿ ಈಗಾಗಲೇ ಖಾಸಗಿ ಸಂಸ್ಥೆಗಳ ಸಿಎಸ್​ಆರ್​ ನಿಧಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಂಆರ್​ಐ ಸ್ಕ್ಯಾನಿಂಗ್​ ಯಂತ್ರ ಅಳವಡಿಸಲು ಕ್ರಮವಹಿಸಲಾಗುವುದು ಎಂದ ಅವರು, ಸಾತನೂರು ಕೋಡಿಹಳ್ಳಿ ಭಾಗಕ್ಕೆ ಎರಡು ಆಂಬುಲೆನ್ಸ್​ ಒದಗಿಸಲಾಗುತ್ತಿದೆ ಎಂದು ಮಾಹಿತಿ ನಿಡಿದರು.

ಎಸ್​ಟಿಆರ್​ಆರ್​ ನಿರ್ಮಾಣ:

ಬೆಂಗಳೂರಿನ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಎಸ್​ಟಿಆರ್​ಆರ್​ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವ ನಿತಿನ್​ ಗಡ್ಕರ್​ ಅವರಿಗೆ ನಾನು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿ 4,750 ಕೋಟಿ ರೂ. ಅನುಮೋದನೆ ನೀಡಿದ್ದಾರೆ. ಇದು ದಾಬಸ್​ಪೇಟೆ, ಅರಿಶಣಕುಂಟೆ, ಮಾಗಡಿ, ರಾಮನಗರ, ಕನಕಪುರ, ಆನೇಕಲ್​ ನಂತರ ಹೊಸೂರು ಸಂಪರ್ಕ ಕಲ್ಪಿಸುತ್ತದೆ. ಇದಕ್ಕೆ ಜಾಗತಿಕ ಟೆಂಡರ್​ ಕರೆಯಲಾಗಿದೆ ಎಂದು ಮಂಜುನಾಥ್​ ತಿಳಿಸಿದರು.

ಅಲ್ಲದೆ, ಬೆಂಗಳೂರು- ಮೈಸೂರು ಅಕ್ಸೆಸ್​ ಕಂಟ್ರೋಲ್​ ಹೆದ್ದಾರಿಯ ಕದಂಬ ಜಂಕ್ಷನ್​ ಬಳಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಪರಿಶೀಲನೆ ಮಾಡಲಾಗಿದೆ. ಹೈವೇಗೆ ಅಂಡರ್​ ಗ್ರೌಂಡ್​ ಟನಲ್​ ಮೂಲಕ ಸಂಪರ್ಕ ಕಲ್ಪಿಸುವುದು. ಇಲ್ಲವೇ 3&4 ಕಿ.ಮೀ ಮುಂಚಿತವಾಗಿಯೇ ನೈಸ್​ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಮಾಡುವ ಎರಡು ಸಾಧ್ಯತೆಗಳನ್ನು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಅವರ ಅಧ್ಯಕ್ಷತೆಯಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.