ನರಗುಂದ: ಕಾರಿನೊಳಗೆ ಅಡಗಿ ಕುಳಿತಿದ್ದ ಅತ್ಯಂತ ಅಪಾಯಕಾರಿ ವಿಷ ಸರ್ಪಗಳಲ್ಲಿ ಒಂದಾಗಿರುವ ಇಂಡಿಯನ್ ಕಾಮನ್ ಕರೆಟ್ (ಕಟ್ಟು ಹಾವು) ಅನ್ನು ಗೃಹರಕ್ಷಕ ದಳದ ಸಿಬ್ಬಂದಿ, ಉರಗ ರಕ್ಷಕ ಬಿ.ಆರ್. ಸುರೇಬಾನ ಬುಧವಾರ ರಾತ್ರಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಪಟ್ಟಣದ ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ನ್ಯಾಷನಲ್ ಕಾರ್ ಮೋಟರ್ಸ್‌ನಲ್ಲಿ ರಿಪೇರಿಗೆ ಬಿಟ್ಟಿದ್ದ ಇಂಡಿಕಾ ಕಾರಿನಲ್ಲಿ ಈ ಹಾವು ಪತ್ತೆಯಾಗಿದೆ.
ಹಗಲಲ್ಲಿ ಸಂಪೂರ್ಣ ನಿಶಾಚಾರಿಯಾಗಿರುವ ಈ ಹಾವು ರಾತ್ರಿ ಅತ್ಯಂತ ತೀಕ್ಷ್ಣವಾಗಿರುತ್ತದೆ. ನಾಗರ ಹಾವಿಗಿಂತಲೂ 5 ಪಟ್ಟು ಹೆಚ್ಚಿನ ವಿಷ ಇದರಲ್ಲಿರುತ್ತದೆ.
ಬಹುತೇಕ ಹಾವುಗಳು ಜನದಟ್ಟಣೆ ಪ್ರದೇಶಗಳಿಂದ ದೂರವಿರಲು ಬಯಸುತ್ತವೆ.
ಆದರೆ, ಈ ಹಾವು ಮನುಷ್ಯರ ಭಯವೂ ಇಲ್ಲದೆ ರಾತ್ರಿ ಹೊತ್ತು ಓಡಾಡುತ್ತದೆ. ಮೀನು, ಕಪ್ಪೆ, ವಿಷರಹಿತ ಹಾವುಗಳೇ ಇದರ ಪ್ರಮುಖ ಆಹಾರವಾಗಿದ್ದು, ಹಲವಾರು ವಿಶೇಷತೆಯಿಂದ ಕೂಡಿದೆ ಎನ್ನುತ್ತಾರೆ ಉರಗರಕ್ಷಕ ಬಿ.ಆರ್. ಸುರೇಬಾನ.