ಮೈಸೂರು: ಸಾಮಾಜಿಕ ಸಮಸ್ಯೆಗಳಿಗೆ ಕವಿ ಸ್ಪಂದಿಸಿ ಕಾವ್ಯ ಕೃಷಿ ಮಾಡಬೇಕು ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ ನಾಯಕ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ನಂಜುಂಡಸ್ವಾಮಿ ಹರದನಹಳ್ಳಿ ಅವರ ‘ನೆಲೆ ನಿಲ್ಲದ ಮುಗಿಲು’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕವಿ ಜೀವಂತವಾಗಿರಬೇಕು. ಸಾಮಾಜಿಕ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಬೇಕು. ಆದರೆ, ಈಗಿನ ಕಾಲಘಟ್ಟದಲ್ಲಿ ಜೀವನ ಪ್ರೀತಿಯೇ ಮರೆಯಾಗುತ್ತಿದೆ. ಆದರೆ, ಜೀವನಪ್ರೀತಿ ಇಲ್ಲದವನು ಕವಿ ಆಗಲು ಸಾಧ್ಯವಿಲ್ಲ ಎಂದರು.
ಬರಹಗಾರರಿಗೆ ಬದುಕಿನ ಬೆಲೆ, ಶ್ರಮ ಬೆವರಿನ ಬೆಲೆ ಗೊತ್ತಿರಬೇಕು. ತಳಸಮುದಾಯದೊಂದಿಗೆ ಸಂವಾದಿಸಬೇಕು. ಆಗ ಮಾತ್ರ ಉತ್ತಮ ಕಾವ್ಯ ರಚನೆ ಸಾಧ್ಯವಾಗಲಿದೆ ಎಂದರು.
ಪ್ರಸ್ತುತ ಸಂಬಂಧ ವ್ಯಾಪಾರವಾಗಿದೆ. ಹಳ್ಳಿಗಳಲ್ಲಿ ಅನಾಥಾಶ್ರಮಗಳು ಹೆಚ್ಚುತ್ತಿವೆ. ಮದುವೆ ಆಗಲು ನಮ್ಮ ಜಾತಿಯ ಹೆಣ್ಣೇ ಆಗಬೇಕು ಎಂದು ಕೇಳುತ್ತಿರುವುದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅನೇಕ ಉಪನ್ಯಾಸಕರು, ಪ್ರಾಧ್ಯಾಪಕರು ದೊರೆಯುತ್ತಾರೆ. ಆದರೆ, ಪಿ.ಲಂಕೇಶ್, ಪ್ರೊ.ಕೆ.ರಾಮದಾಸ್, ಪೂರ್ಣಚಂದ್ರ ತೇಜಸ್ವಿ ಅವರಂತಹ ಮೇಷ್ಟ್ರು ಸಿಗುವುದಿಲ್ಲ. ಸದ್ಯಕ್ಕೆ ಪ್ರೊ.ಬರಗೂರು ರಾಮಚಂದ್ರಪ್ಪ ಅವರೊಬ್ಬರು ಕಾಣಿಸುತ್ತಿದ್ದಾರೆ ಎಂದು ಹೇಳಿದರು.
ಬುದ್ಧ, ಬಸವಣ್ಣವರು, ಕುವೆಂಪು ನಮಗೆ ಪ್ರೇರಣೆಯಾಗಬೇಕು. ಬುದ್ಧ ಹೇಳಿದಂತೆ ‘ಯಾರೇ ಏನೇ ಮಾಡಿದರೂ ಕೊನೆಗೆ ನಿನಗೆ ನೀನೇ ಬೆಳಕು’ ಎಂದನ್ನು ಅರಿಯಬೇಕು ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು- ಚಾಮರಾಜನಗರ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ, ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪುಟ್ಟಶೆಟ್ಟಿ, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ಕವಿ ಡಾ.ನಂಜುಂಡಸ್ವಾಮಿ ಇನ್ನಿತರರಿದ್ದರು