ಎಚ್.ಡಿ.ಕೋಟೆ: ಕವಿಗಳು ರಚಿಸುವ ಕವಿತೆಗಳು ವರ್ತಮಾನದ ಆಗುಹೋಗುಗಳಿಗೆ ಸ್ಪಂದಿಸಬೇಕು ಎಂದು ಸಾಹಿತಿ ರಂಗನಾಥ್ ಮೈಸೂರು ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಆಯೋಜಿಸಿದ್ದ ಗ್ರಾಮೀಣ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮೊಳಗಿನ ಭಾವಗಳ ಅಭಿವ್ಯಕ್ತಿಯನ್ನು ಕವಿತೆ ಎನ್ನುವುದಾದರೆ ಅದು ವೃಷ್ಟಿ ಹಿತಕ್ಕಿಂತ ಸಮಷ್ಟಿ ಹಿತಕ್ಕೆ ಹೆಚ್ಚು ಒತ್ತುಕೊಡಬೇಕು. ಮನಸ್ಸನ್ನು ಅರಳಿಸುವ ಕವಿತೆಗಳು ಹೆಚ್ಚು ಸೃಷ್ಟಿಯಾಗಬೇಕೇ ವಿನಾ ಕೆರಳಿಸುವ ಕವಿತೆಗಳಲ್ಲ. ನವ್ಯ, ನವೋದಯ, ದಲಿತ, ಬಂಡಾಯ ಕವಿತೆಗಳು ಕನ್ನಡ ಸಾಹಿತ್ಯದಲ್ಲಿ ಕಂಡುಬಂದಿವೆ. ಕವಿಗೆ ಸಹೃದಯರ ಬೆಂಬಲವೂ ಮುಖ್ಯವಾದುದು. ಕೇಳುಗರಿಲ್ಲದ ಕವಿತೆ ಮುಡಿಯುವವರಿಲ್ಲದ ಮಲ್ಲಿಗೆಯಂತೆ. ಇಂದು ಕೇಳುವ ಕಿವಿಗಳಿಗಿಂತ ಬರೆಯುವ ಕವಿಗಳೇ ಹೆಚ್ಚಾಗಿದ್ದಾರೆ ಎಂದರು.
ಕವಿಗೋಷ್ಠಿಗಳಲ್ಲಿ ಕವಿತೆ ವಾಚಿಸುವವರ ಸಂಖ್ಯೆ ಅಪಾರವಾಗಿದೆ. ಉತ್ತಮ ಕವಿತೆಗಳ ಸೃಷ್ಟಿಗೆ ಹಿರಿಯ ಕವಿಗಳ ಕಾವ್ಯಗಳನ್ನು ಅಧ್ಯಯನ ಮಾಡುವ ಅಗತ್ಯ ಹೆಚ್ಚಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಬರಹಗಾರರಿಗೆ ವೇದಿಕೆ ಒದಗಿಸಿಕೊಡುವ ಕೆಲಸವನ್ನು ಗ್ರಾಮೀಣ ದಸರಾ ಕವಿಗೋಷ್ಠಿಯ ಮೂಲಕ ಕಳೆದ 9 ವರ್ಷಗಳಿಂದಲೂ ಮಾಡುತ್ತಿರುವುದು ಸಂತಸದ ಸಂಗತಿ. ಇದಕ್ಕಾಗಿ ಕನ್ನಡ ಪ್ರಮೋದ್ ಅಭಿನಂದನಾರ್ಹರು ಎಂದು ರಂಗನಾಥ್ ನುಡಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ಸಾಹಿತ್ಯ ದಾಸೋಹದ ಸಂಸ್ಥಾಪಕ ಹಾಗೂ ಹಿರಿಯ ಲೇಖಕ ಎಂ.ಆರ್.ಆನಂದ್ ಮಾತನಾಡಿ, ಕವಿಗೋಷ್ಠಿಯಲ್ಲಿ ಎಲ್ಲ ಕವಿಗಳೂ ಉತ್ತಮ ಕವಿತೆಗಳನ್ನು ಪ್ರಸ್ತುತಪಡಿಸಿದ್ದಾರೆ. ನಗರಪ್ರದೇಶಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿ ಕವಿಗೋಷ್ಠಿಗಳನ್ನು ಆಯೋಜಿಸುವ ಮೂಲಕ ಯುವ ಪೀಳಿಗೆಯನ್ನು ಸಾಹಿತ್ಯದತ್ತ ಆಕರ್ಷಿಸಬಹುದಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಾತನಾಡಿ, ಪ್ರಸ್ತುತ ನೆಲ, ಜಲ ವಿಷಯ ಬಂದಂತಹ ಸಂದರ್ಭದಲ್ಲಿ ಭಾಷೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಮೂಡುವ ಕಥೆ, ಕವನಗಳನ್ನು ರಚಿಸಲು ಇಂತಹ ಅವಕಾಶಗಳು ತುಂಬ ಅಗತ್ಯವಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಎಲ್ಲ ಕ್ಷೇತ್ರಗಳ ಜನರೂ ಬರಬೇಕಾಗಿದೆ. ಹಾಗಾಗಿ ಶೀಘ್ರದಲ್ಲೇ ತಾಲೂಕು ಮಟ್ಟದ ಶಿಕ್ಷಕರ ಹಬ್ಬ ಆಯೋಜಿಸುವುದಾಗಿ ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಧುಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕೋಶಾಧ್ಯಕ್ಷ ಸಿದ್ದರಾಜು , ಸ್ವಾಮಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಚನ್ನಕೇಶವ ನಾಯಕ, ಚಂದನ, ದೈಹಿಕ ಶಿಕ್ಷಣ ನಿರ್ದೇಶಕ ಕಲ್ಲೇಶ ಗೌಡ ಇತರರು ಇದ್ದರು.
ಕಾಳೇಗೌಡ, ಎಂ. ಕುಮಾರಿ, ಮಹದೇವಯ್ಯ, ಮಹದೇವ, ಕಿತ್ತೂರು ಭಾಸ್ಕರ್, ಬಾಲಸುಬ್ರಹ್ಮಣ್ಯಂ, ಚೇತನ್, ಸಂಜಯ್ ರಾಮೇನಹಳ್ಳಿ, ಸಿದ್ದರಾಜು ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.