ಯಕ್ಷಗಾನದ ವೇಷಭೂಷಣ ಧರಿಸಿ ಭಿಕ್ಷಾಟನೆ ನಡೆಸಿ ಯಕ್ಷಗಾನ ಕಲೆಗೆ ಅಪಚಾರ ಆಗುತ್ತಿರುವ ಹಿನ್ನೆಲೆಯಲ್ಲಿ ಈ ದಂಧೆಯನ್ನು ನಿಷೇಧಿಸುವಂತೆ ಕೋರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಿಗೆ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮನವಿ ಸಲ್ಲಿಸಿದರು. 
ಜಿಲ್ಲೆ

ಯಕ್ಷಗಾನ ಕಲೆಗೆ ಅಪಚಾರ ತಡೆಯಲು ಮನವಿ

ಮಂಗಳೂರು: ಯಕ್ಷಗಾನದ ವೇಷಭೂಷಣ ಧರಿಸಿ ಭಿಕ್ಷಾಟನೆ ನಡೆಸಿ ಯಕ್ಷಗಾನ ಕಲೆಗೆ ಅಪಚಾರ ಆಗುತ್ತಿರುವ ಹಿನ್ನೆಲೆಯಲ್ಲಿ ಈ ದಂಧೆಯನ್ನು ನಿಷೇಧಿಸುವಂತೆ ಕೋರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ತಿಳಿಸಿದ್ದಾರೆ.

ಯಕ್ಷಗಾನ ವೇದಿಕೆಗಳಲ್ಲಿ ಮಾತ್ರ ಪ್ರದರ್ಶನ ಕಾಣಬೇಕಾದ ಧಾರ್ಮಿಕ ಶ್ರೇಷ್ಠ ಕಲೆಯನ್ನು ಹಬ್ಬಗಳ ವೇಳೆ ವೇಷ ಧರಿಸಿ ಬೀದಿ ಬೀದಿಗಳಲ್ಲಿ ಅಶ್ಲೀಲವಾಗಿ, ಅಸಭ್ಯವಾಗಿ, ಮದ್ಯಪಾನ ಮಾಡಿ ತೂರಾಡಿಕೊಂಡು ಭಿಕ್ಷೆ ಎತ್ತುವುದನ್ನು ಗಮನಿಸುತ್ತಿದ್ದೇವೆ. ಸಾಮಾಜಿಕ ಕಳಕಳಿಯಿಂದ ಈ ದಂಧೆಯನ್ನು ನಿಲ್ಲಿಸಬೇಕಿದೆ. ಶ್ರೀಕೃಷ್ಣಾಷ್ಟಮಿ, ಗಣೇಶೋತ್ಸವ, ನವರಾತ್ರಿ ಸಂದರ್ಭ ಯಕ್ಷಗಾನ ವೇಷಭೂಷಣ ಧಾರಣೆ ಮಾಡಿಕೊಂಡು ಹಗಲಿಡೀ ಅಸಹ್ಯಕರವಾಗಿ ಭಿಕ್ಷಾಟನೆ ಮಾಡುವುದು ಯಕ್ಷಗಾನದಲ್ಲಿ ಅನೇಕ ವರುಷಗಳಿಂದ ದುಡಿಯುತ್ತಿರುವ ನನ್ನಂತಹ ಅನೇಕ ಕಲಾವಿದರಿಗೆ ಬೇಸರ ತರಿಸಿದೆ. ಇನ್ನು ಮುಂದೆ ಯಕ್ಷಗಾನದ ಗೆಜ್ಜೆಕಟ್ಟಿ, ಮುಖಕ್ಕೆ ಬಣ್ಣ ಬಳಿದು, ಯಕ್ಷಗಾನ ವೇಷಭೂಷಣ ಧರಿಸಿ ಬೀದಿ ಬೀದಿ ಅಲೆದು ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಬೇಕು ಎಂಬುದು ಸಮಸ್ತ ಯಕ್ಷಪ್ರೇಮಿಗಳ ಪರವಾಗಿ ಪ್ರಾರ್ಥನೆ ಎಂದು ಅವರು ತಿಳಿಸಿದ್ದಾರೆ.

ವೇಷಭೂಷಣ ಬಾಡಿಗೆದಾರರು ಯಕ್ಷಗಾನಕ್ಕೆ ಸಂಬಂಧಿಸಿದ ಪರಿಕರಗಳನ್ನು ಬಾಡಿಗೆಗೆ ನೀಡಬಾರದು. ಯಕ್ಷಗಾನ ವೇಷ ಧರಿಸಿ ಭಿಕ್ಷಾಟನೆ ನಡೆಸಿದರೆ ನಾಗರಿಕ ಸಮಾಜ ಭಿಕ್ಷೆ ನೀಡಬಾರದು, ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.