ವಿಜಯಪುರ: ಹುಬ್ಬಳ್ಳಿಯಲ್ಲಿ ಹಡಪದ ಸಮಾಜದ ನೀಲಮ್ಮ ಹಂಪಣ್ಣ ಹಡಪದ ಎಂಬ ಮಹಿಳೆ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೇತೃತ್ವ ಸಮುದಾಯದ ಮುಖಂಡರು ಶುಕ್ರವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಹುಬ್ಬಳಿ ನಗರದಲ್ಲಿ ಹಿಂದುಳಿದ ಸಮಾಜವಾದ ಹಡಪದ ಸಮಾಜಕ್ಕೆ ಸೇರಿದ ನೀಲಮ್ಮ ಅಪ್ಪಣ್ಣ ಹಡಪದ ಇವರ ಮೇಲೆ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಜೀವ ಬೆದರಿಕೆ ಹಾಕಿದ್ದಾನೆ. ಚಾಕುವಿನಿಂದ ಇರಿದು ಹತ್ಯೆಗೆ ಪ್ರಯತ್ನ ಪಟ್ಟಿದ್ದು, ಆ ದುಷ್ಕರ್ಮಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತಾಗಬೇಕು ಎಂದು ಒತ್ತಾಯಿಸಿದರು.
ಹಡಪದ ಸಮುದಾಯ ಅತ್ಯಂತ ಹಿಂದುಳಿದಿದ್ದು, ಈವರೆಗೆ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸುತ್ತಲೇ ಇದೆ. ಶೋಷಣೆಗೆ ಒಳಗಾಗುತ್ತಲೇ ಇರುವ ಈ ಸಮುದಾಯಕ್ಕೆ ಸರ್ಕಾರ ಆಸರೆಯಾಗಿ ನಿಲ್ಲಬೇಕು. ಕ್ಷೌರಿಕ ಸಮುದಾಯದ ಮಕ್ಕಳು ಮತ್ತು ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಬೇಕು. ಹಲ್ಲೆಗೊಳಗಾದ ಮಹಿಳೆಯ ಕುಟುಂಬಕ್ಕೆ ಭದ್ರತೆ ನೀಡಿ ಹಲ್ಲೆ ನಡೆಸಿದ ದುಷ್ಕರ್ಮಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಎಂ.ಬಿ. ಅರ್ಜುಣಗಿ, ಜಿಲ್ಲಾಧ್ಯಕ್ಷ ವಿರೂಪಾಕ್ಷಿ ಜಿ. ಕತ್ನಳ್ಳಿ, ಜಿಲ್ಲಾ ಉಪಾಧ್ಯಕ್ಷ ಶಾಂತಾನಂದ ದೇವೂರ, ಬಾಬು ಹಡಪದ, ಜಿಲ್ಲಾ ಕಾರ್ಯಧ್ಯಕ್ಷ ಶಿವಾನಂದ ಆರ್. ನಾವಿ, ಜಿಲ್ಲಾ ಕೋಶಾಧ್ಯಕ್ಷ ನಿಂಗಪ್ಪ ಎ. ನಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್.ಉತ್ನಾಳ, ಜಿಲ್ಲಾ ಸಂಚಾಲಕ ಮಲ್ಲೇಶಿ ನಾವಿ, ನಗರ ಸಂಚಾಲಕ ಬಸವರಾಜ ಬೆಕಿನಾಳ, ಸಿಂದಗಿ ಪುರಸಭೆಯ ಮಾಜಿ ಸದಸ್ಯ ಚಂದ್ರಶೇಖರ ಅಮಲಿಹಾಳ, ಬಸವರಾಜ ಬ್ಯಾಲ್ಯಾಳ, ಈರಣ್ಣ ಹಡಪದ, ಚಿದಾನಂದ ತೊರವಿ, ಧರೆಪ್ಪ ನಾವಿ, ಓಂಕಾರ ನಾವಿ, ರಾಜು ಯಂಕಂಚಿ, ಶರಣು ಹಡಪದ, ಶರಣಬಸು ಮಾಶ್ಯಾಳ, ರವಿ ಹಂಜಗಿ ಮತ್ತಿತರರಿದ್ದರು.