ಶಿರಸಿ: ಸ್ವಂತ ಮನೆ ಹೊಂದುವುದು ಎಲ್ಲರ ಕನಸು. ಈ ವಿಷಯದಲ್ಲಿ ಬಡವರಿಗೆ ಸರ್ಕಾರದ ಬೆಂಬಲ ಅಗತ್ಯವಾಗಿದೆ. ವಾಜಪೇಯಿ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ನಿವೇಶನ ನೀಡಬೇಕು ಎಂದು ಶಿರಸಿಯ ವಸತಿರಹಿತರು ನಗರಸಭೆಗೆ ಅರ್ಜಿ ಸಲ್ಲಿಸಿ ದಶಕಗಳೇ ಕಳೆದಿವೆ. ಇದುವರೆಗೂ ಅವರಿಗೆ ನಿವೇಶನ ಸಿಗದೆ ಇರುವುದರಿಂದ ಚಾತಕ ಪಕ್ಷಿಯಂತೆ ಕಾಯುತ್ತಲಿದ್ದಾರೆ.
ರಾಜ್ಯ ಸರ್ಕಾರ 2007ರಲ್ಲಿ ಆಶ್ರಯ ನಗರ ನಿವೇಶನಗಳ ಯೋಜನೆ ಮಾರ್ಪಾಡು ಮಾಡಿ ವಾಜಪೇಯಿ ನಗರ ನಿವೇಶನಗಳ ಯೋಜನೆ ಹೆಸರಿನಲ್ಲಿ ನಿವೇಶನ ಹೊಂದಿರದ, ಬಡತನ ರೇಖೆಗಿಂತ ಕೆಳಗಿರುವವರ ಸಲುವಾಗಿ ನಿವೇಶನ ನೀಡಿ ಮನೆ ಕಟ್ಟಿಕೊಡಲು ತೀರ್ವನಿಸಿತ್ತು. ಈ ಬಗ್ಗೆ 2010-11ರಲ್ಲಿ ಬಡತನ ರೇಖೆಗಿಂತ ಕೆಳಗಿರುವ, ಸ್ವಂತ ನಿವೇಶನ ಇಲ್ಲದವರಿಂದ ಅರ್ಜಿ ಆಹ್ವಾನಿಸಲಾಗಿತ್ತು.
ನಿವೇಶನ ಹಂಚಿಕೆಯಾದ ಬಳಿಕ ಅಂಬೇಡ್ಕರ್ ವಸತಿ ಯೋಜನೆ ಅಥವಾ ರಾಜೀವಗಾಂಧಿ ವಸತಿ ಯೋಜನೆಯಡಿ ಮನೆ ಕಟ್ಟಿಕೊಡಲು ಯೋಜನೆಯನ್ನೂ ರೂಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ಸಾವಿರದಷ್ಟು ನಗರವಾಸಿ ಬಡವರು ಅರ್ಜಿ ಸಲ್ಲಿಸಿದ್ದರು.
ಬಡ ಮತ್ತು ಕೆಳ ವರ್ಗದವರೇ ಹೆಚ್ಚಾಗಿರುವ ಇಲ್ಲಿಯ ಗಣೇಶನಗರ, ಕಸ್ತೂರಬಾನಗರ, ಗಾಂಧಿನಗರ ಇನ್ನಿತರ ಭಾಗದವರು ಅಧಿಕ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನೆಲ್ಲ ಪರಿಶೀಲಿಸಿದ್ದ ನಗರಸಭೆ 1,610 ಅರ್ಜಿದಾರರು ಯೋಜನೆ ಫಲಾನುಭವಿ ಆಗಲು ಅರ್ಹ ಅಂದು ಆಯ್ಕೆ ಮಾಡಿತ್ತು. ಅತಿಕ್ರಮಣ ಜಾಗದಲ್ಲಿ ಮನೆ ನಿರ್ವಿುಸಿಕೊಂಡು ವಾಸವಾಗಿದ್ದ ಈ ಜನತೆಗೆ ಸ್ವಂತ ನಿವೇಶನದಲ್ಲಿ ಯಾರದೇ ಹಂಗಿಲ್ಲದ ಮನೆಯಲ್ಲಿ ವಾಸವಾಗುವ ಆಶಾಭಾವನೆ ಸಹ ಮೂಡಿತ್ತು. ಆದರೆ, ಈಗ ದಶಕವೇ ಕಳೆದಿವೆ. ಸಲ್ಲಿಸಿದ ಅರ್ಜಿಗಳು ನಗರಸಭೆಯಲ್ಲೇ ಇವೆ. ಬಡವರು, ಕೂಲಿ ಕಾರ್ವಿುಕರು ಅತಿಕ್ರಮಿತ ಪ್ರದೇಶದಲ್ಲಿ ಜೋಪಡಿ ನಿರ್ವಿುಸಿಕೊಂಡು ಅಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
ಏಕೆ ಹೀಗೆ?
1610 ಅರ್ಜಿಗಳು ಅರ್ಹ ಎಂದು ಸ್ವೀಕಾರವಾಗಿದ್ದರೂ, ಇದುವರೆಗೆ ನಿವೇಶನ ಹೊಂದಿದ್ದ 212 ಜನರಿಗೆ ಮಾತ್ರ ಇತ್ತೀಚೆಗೆ ಮನೆ ನಿರ್ವಿುಸಿ ಕೊಡಲಾಗಿದೆ. ಇದಕ್ಕೆ ಮುಖ್ಯ ಕಾರಣ ನಗರ ಪ್ರದೇಶದಲ್ಲಿ ಜಾಗದ ಕೊರತೆ. ಗಣೇಶ ನಗರ ಇನ್ನಿತರ ಸ್ಥಳಗಳಲ್ಲಿ ಅರಣ್ಯ ಭೂಮಿಯೇ ಜಾಸ್ತಿ ಇದೆ. ಅತಿಕ್ರಮಣ ಮಾಡಿಕೊಂಡವರ ಹೆಸರಿಗೆ ಇನ್ನೂ ಭೂಮಿ ಮಂಜೂರಾಗಿಲ್ಲ. ಅಲ್ಲದೆ, ನಗರ ಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ವಿುಸಲು ಕಂದಾಯ ಹಾಗೂ ನಗರಸಭೆ ಜಾಗದ ಲಭ್ಯತೆ ಇರದ ಕಾರಣಕ್ಕೆ ನಗರ ವಸತಿ ಯೋಜನೆ ಅನುಷ್ಠಾನ ನನೆಗುದಿಗೆ ಬಿದ್ದಿದೆ.
ನಗರದಲ್ಲಿ ಸೈಟ್ ಖರೀದಿಸಿ ಈ ಅರ್ಜಿದಾರರಿಗೆ ಮನೆ ಒದಗಿಸಿಕೊಡಬೇಕೆಂದರೂ, ಪ್ರತಿ ಗುಂಟೆಗೆ 15ರಿಂದ 20 ಲಕ್ಷ ರೂ.ವರೆಗೆ ಭೂಮಿಯ ದರವಿದೆ. ಹೀಗಾಗಿ, ನಗರದಲ್ಲೇ ಅವರಿಗೆ ಮನೆ ನಿರ್ವಿುಸಿಕೊಡುವ ಯತ್ನ ನನೆಗುದಿಗೆ ಬಿದ್ದಿದೆ. ಇನ್ನು ನಗರದಿಂದ ಹೊರಗಿನ ಹಳ್ಳಿಗಳಲ್ಲಿ ಜಾಗ ಖರೀದಿಸಿ ನಿವೇಶನ ನೀಡಲು ಅರ್ಜಿ ಸಲ್ಲಿಸಿದವರು ಒಪ್ಪುತ್ತಿಲ್ಲ. ಪ್ರತಿ ದಿನ ನಾವು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರೇ ಹೆಚ್ಚಾಗಿದ್ದೇವೆ. ಹಳ್ಳಿಗಳಿಂದ ನಗರಕ್ಕೆ ಬಂದು ಕೆಲಸ ಮಾಡಲು ನಮ್ಮಿಂದ ಸಾಧ್ಯವಿಲ್ಲ. ನಮ್ಮಲ್ಲಿ ವಾಹನವೂ ಇಲ್ಲ ಎನ್ನುತ್ತಿದ್ದಾರೆ. ಒಂದೊಮ್ಮೆ ಈ ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದರೆ ಅಥವಾ ಅತಿಕ್ರಮಿತ ಭೂಮಿ ಈಗಾಗಲೇ ಮಂಜೂರಾಗಿದ್ದರೆ ಅವರಿಗೆ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ತಕ್ಷಣ ಮನೆ ನಿರ್ವಿುಸಿಕೊಡುತ್ತಿದ್ದೆವು. ನಿವೇಶನದ ಕೊರತೆಯಿಂದಾಗಿಯೇ ಈ ಅರ್ಜಿ ವಿಲೇವಾರಿ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ನಗರ ಸಮೀಪದ ಜಾಗ ಗುರುತಿಸಲು ನಗರಾಡಳಿತ ಆಸಕ್ತಿ ತೋರದಿರುವುದರಿಂದ ಬಡ ಅರ್ಜಿದಾರರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ವಸತಿ ಯೋಜನೆಯಡಿ ಸ್ವಂತ ನಿವೇಶನ ನೀಡಿ ಎಂದು ಅರ್ಜಿ ಕೊಟ್ಟು ಈಗ ಹತ್ತು ವರ್ಷಗಳೇ ಸಂದಿವೆ. ಆದರೆ, ನಾವು ಆಗ ಹೇಗಿದ್ದೆವೋ ಈಗಲೂ ಹಾಗೇ ಅತಿಕ್ರಮಣ ಜಾಗದಲ್ಲೇ ಇದ್ದೇವೆ. ನಗರಾಡಳಿತದಿಂದ ಯಾವುದೇ ಸ್ಪಂದನೆ ಇಲ್ಲ ಎನ್ನುತ್ತಾರೆ ಗಣೇಶ ನಗರದ ವಸತಿ ರಹಿತ ಕೂಲಿ ಕಾರ್ವಿುಕ ಸುರೇಶ ಭೋವಿ.
ಸಂಪೂರ್ಣ ವಸತಿ ರಹಿತರಿಗೆ ‘ಜಿ’ ಪ್ಲಸ್ ಮಾದರಿಯಲ್ಲಿ ವಸತಿ ಸಂಕೀರ್ಣದಲ್ಲಿ ಮನೆ ನಿರ್ವಿುಸಿ ಕೊಡಲು ನಗರ ಪ್ರದೇಶದಲ್ಲಿ ಜಾಗದ ಲಭ್ಯತೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಜಾಗ ಗುರುತಿಸಿದರೂ, ನಗರದಿಂದ ಏಳೆಂಟು ಕಿಮೀ ದೂರ ಎಂಬ ಕಾರಣಕ್ಕೆ ಅರ್ಜಿದಾರರು ಯಾರೂ ಒಪ್ಪುತ್ತಿಲ್ಲ. ಕಾಂತರಾಜು, ಪೌರಾಯುಕ್ತ, ಶಿರಸಿ ನಗರಸಭೆ ನಗರಕ್ಕೆ ತಾಗಿಕೊಂಡಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಜಾಗ ಹುಡುಕುವ ಪ್ರಯತ್ನ ಆಗಬೇಕೇ ಹೊರತು ದೂರದ ಹಳ್ಳಿಗಳಲ್ಲಿ ಜಾಗ ಹುಡುಕುತ್ತಿದ್ದಾರೆ. ಇದು ಕಾರ್ವಿುಕರಿಗೆ ಸಮಸ್ಯೆಯಾಗಿದೆ. ಪ್ರದೀಪ ಶೆಟ್ಟಿ ನಗರಸಭೆ ಸದಸ್ಯ, ಶಿರಸಿ