ರಾಮನಗರ: ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ಸಾಮಾಜಿಕ ಅಭಿವೃದ್ಧಿ ಹರಿಕಾರರು ದಿ. ದೇವರಾಜು ಅರಸು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸಾಮಾಜಿಕ ಸುಧಾರಣೆ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅಲ್ಲದೆ, ಜನಪರ ಯೋಜನೆಗಳನ್ನೂ ಜಾರಿಗೆ ತಂದರು. ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಉಳುವವನೇ ಭೂ ಒಡೆಯನನ್ನಾಗಿ ಪರಿವರ್ತಿಸಿದರು, ಇದರಿಂದ ಭೂಮಿ ಇಲ್ಲದವರಿಗೆ ಉಳುಮೆಗಾಗಿ ಕೃಷಿ ಭೂಮಿ ದೊರೆಯಿತು, ಭೂಮಿ ಇಲ್ಲದವರಿಗೆ, ಬಡವರಿಗೆ ನ್ಯಾಯ ದೊರಕಿತು, ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾಯಿತು ಎಂದರು.
ಈ ಹಿಂದೆ ಹಲವು ನಾಯಕರು ರಾಜ್ಯದಲ್ಲಿ ಆಡಳಿತ ನಡೆಸಿ ಹೋಗಿದ್ದಾರೆ, ಆದರೆ ಡಿ. ದೇವರಾಜ ಅರಸು ಅವರು 1969-1979 ರವರೆಗೆ ನಡೆಸಿದ ಆಡಳಿತ ಅರಸು ಯುಗವಾಗಿತ್ತು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯಗಳನ್ನು ಸ್ಥಾಪಿಸಿದರು. 1973 ನವೆಂಬರ್ 1 ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು ಎಂದು ಹೇಳಿದರು.
ಜೀತಪದ್ದತಿಯನ್ನು ತೊಲಗಿಸಿ ಜೀತಮುಕ್ತಿ ಪದ್ದತಿಯನ್ನು ಜಾರಿಗೆ ತಂದು ಬಡವರ ಬಾಳಲ್ಲಿ ಬೆಳಕಾದರು. ಬಡವರು ಮುಕ್ತವಾಗಿ ಬದುಕಲು ಅವಕಾಶ ಮಾಡಿಕೊಟ್ಟರು. ಮಲ ಹೊರುವ ಪದ್ದತಿಯನ್ನು ರದ್ದು ಮಾಡಿದರು. ಆ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಹಿರಿಯ ಸಾಹಿತಿ, ಪತ್ರಕರ್ತ ಮಾರಣ್ಣ ಮಾತನಾಡಿ, ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುವಲ್ಲಿ ಡಿ.ದೇವರಾಜ ಅರಸು ಅವರ ಪಾತ್ರ ಬಹು ದೊಡ್ಡದು, ಕೃಷಿಕರು, ಬಡವರು, ಕೂಲಿ ಕಾರ್ಮಿಕರು ನೆಲೆ ಕಾಣಲು ಕಾರಣರಾದರು. ಮೀಸಲಾತಿ ವಿಸ್ತರಣೆ ತಂದರು, ಭೂಸುಧಾರಣೆ ಕಾಯ್ದೆ, ಜೀತಮುಕ್ತಿ ಪದ್ಧತಿ, ಕೃಷಿ, ಹೈನುಗಾರಿಕೆ ಹೀಗೆ ಅನೇಕ ಕಲೆ, ಸಾಹಿತ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಮಾರಣ್ಣ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ರಾಮನಗರ ಜಿಲ್ಲಾ ಕ್ರೀಡಾಂಗಣದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೂ ಡಿ. ದೇವರಾಜ ಅರಸು ಅವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಲಾಲ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ ಹರೀಶ್‌ಕುಮಾರ್, ಹಿಂದುಳಿದ ವರ್ಗಗಳ ಮುಖಂಡರಾದ ಆರ್. ರಂಗಪ್ಪ, ನರಸಿಂಹಯ್ಯ, ಸೀತಾರಾಮ್, ಬಿ. ರಂಗಸ್ವಾಮಿ, ಚಂದ್ರಶೇಖರ್, ರಂಗನಾಥ, ಸಿದ್ದಪ್ಪಾಜಿ, ಶಿವಶಂಕರ್, ವೀರಭದ್ರಯ್ಯ, ಗಣೇಶ್, ಸಂದೀಪ್, ಮಣಿಕಂಠ, ಚಂದ್ರಶೇಖರ್, ಸತೀಶ್ ಇದ್ದರು.
"ಸಾರ್ವಜನಿಕರ ತೊಂದರೆಗಳನ್ನು ನಿವಾರಿಸಿದ ಪ್ರಮುಖರಲ್ಲಿ ಡಿ.ದೇವರಾಜ ಅರಸು ಅವರ ಪಾತ್ರ ದೊಡ್ಡದು, ಕೃಷಿಕರು, ಬಡವರು, ಕೂಲಿ ಕಾರ್ಮಿಕರು ನೆಲೆ ಕಾಣಲು ಕಾರಣರಾದರು. ಮೀಸಲಾತಿ ವಿಸ್ತರಣೆ ತಂದರು, ಹಿಂದುಳಿದ, ದಲಿತ, ಬಡವರ್ಗ ಸೇರಿ ಕಟ್ಟಕಡೆಯ ವ್ಯಕ್ತಿಯ ಕುರಿತು ಚಿಂತನೆ ನಡೆಸಿ ಸಾಮಾಜಿಕವಾಗಿ ಹಿಂದುಳಿದಿದ್ದ ಸಮುದಾಯಗಳನ್ನು ಮುಂಚೂಣಿಗೆ ತರಲು ನಾನಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ."
ರೈಡ್ ನಾಗರಾಜು, ಜಿಲ್ಲಾಧ್ಯಕ್ಷ, ಹಿಂದುಳಿದ ಜಾತಿಗಳ ಮಹಾ ಒಕ್ಕೂಟ, ರಾಮನಗರ ಜಿಲ್ಲೆ
"ಹಿಂದುಳಿದ ವರ್ಗದಲ್ಲಿ ಸುಮಾರು 108 ಜಾತಿಗಳು ಬರುತ್ತವೆ. ರಾಮನಗರ ಜಿಲ್ಲಾ ಕೆಂದ್ರದಲ್ಲಿ ಸುಸಜ್ಜಿತ ದೇವರಾಜು ಅರಸು ಭವನ ಬೇಕಾಗಿದೆ. ಆ ದಿಶೆಯಲ್ಲಿ ಭವನ ನಿರ್ಮಾಣಕ್ಕೆ ಶಾಸಕರು ಒತ್ತು ನೀಡಬೇಕು. ಮುಂದಿನ ದೇವರಾಜು ಅರಸು ಜನ್ಮದಿನಾಚರಣೆ ಹೊಸ ಭವನದಲ್ಲೇ ಆಚರಿಸುವಂತಾಗಬೇಕು."
ಬಿ. ಉಮೇಶ್, ವಿಶ್ವಕರ್ಮ ಸಂಘ ರಾಜ್ಯಾಧ್ಯಕ್ಷರು.