ಕಲಾದಗಿ: ಮಾಡಿಕೊಂಡ ಹರಕೆ ತೀರಿಸಲು ಭಕ್ತರಿಬ್ಬರು ದೀಡ ನಮಸ್ಕಾರ ಹಾಕುತ್ತಾ ಆಂಧ್ರ ಪ್ರದೇಶದ ಸುಕ್ಷೇತ್ರ ಶ್ರೀಶೈಲಕ್ಕೆ ಹೊರಟ ಭಕ್ತಿಯ ಪರಾಕಾಷ್ಠೆ ದೃಶ್ಯ ಶುಕ್ರವಾರ ಸಂಜೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಂಡುಬಂತು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಅಡಿವೆಪ್ಪ ತ.ಕಟಾರವಿ ಹಾಗೂ ಮಹಾನಂದ ಸ. ಚನಗೌಡರ ಎಂಬುವವರೇ ಹೀಗೆ ಶ್ರೀಶೈಲಕ್ಕೆ ಹೊರಟಿರುವ ಮಲ್ಲಯ್ಯನ ಭಕ್ತರು.
ಹರಕೆ ತೀರಿಸಲು: ಯುಗಾದಿಯಂದು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಕಳೆದ 17 ವರ್ಷದಿಂದ ಪಾದಯಾತ್ರೆ ಮೂಲಕ ಹೋಗಿಬರುತ್ತಿದ್ದ ಅಡಿವೆಪ್ಪ ಹಾಗೂ 2 ವರ್ಷಗಳಿಂದ ಪಾದಯಾತ್ರೆ ಮೂಲಕ ಹೋಗಿ ಬರುತ್ತಿದ್ದ ಮಹಾನಂದ ಅವರು ಮಾಡಿಕೊಂಡ ಹರಕೆಯನ್ನು ತೀರಿಸಲು ಬೇಡಿಕೊಂಡಂತೆ ಮಲ್ಲಯ್ಯನತ್ತ ದೀಡ ನಮಸ್ಕಾರ ಹಾಕುತ್ತ ಹೊರಟಿರುವುದು ನೋಡುಗರ ಅಚ್ಚರಿಗೆ ಹಾಗೂ ಮೆಚ್ಚುಗೆಗೆ ಕಾರಣವಾಗಿದೆ.
ಮಾ.3ರಂದು ಇಂಗಳಗಾಂವ ಗ್ರಾಮದಿಂದ ದೀಡ ನಮಸ್ಕಾರ ಹಾಕುತ್ತಾ ಹೊಟಿರುವು ಇವರು ದಿನಕ್ಕೆ 25 ರಿಂದ 30 ಕಿಮೀ ವರೆಗೆ ಸಾಗುತ್ತಿದ್ದು, ಯುಗಾದಿಯ ಹೊತ್ತಿಗೆ ಶ್ರೀಶೈಲ ತಲುಪುವ ಭರವಸೆ ಇಟ್ಟುಕೊಂಡಿದ್ದಾರೆ. ಇವರ ಜೊತೆಯಾಗಿ ರಾಜು ತೊದಲಬಾಗಿ ಎಂಬುವವರು ಸೈಕಲ್‌ನಲ್ಲಿ ಸಾಮಾನು ಇಟ್ಟುಕೊಂಡು ಹಾಗೂ ಗಂಗವ್ವ ಅಂಬಿಯವರು ಪಾದಯಾತ್ರೆ ಮೂಲ ಹೆಜ್ಜೆ ಹಾಕುತ್ತಿದ್ದಾರೆ.
ಯುಗಾದಿಯಂದು ಶ್ರೀಶೈಲದಲ್ಲಿ ನಡೆಯುವ ಮಲ್ಲಿಕಾರ್ಜುನ ದೇವರ ರಥೋತ್ಸವಕ್ಕೆಂದು ಪ್ರತಿವರ್ಷ ಬಹತೇಕರು ನೂರಾರು ಕಿಮೀ ದೂರವನ್ನು ಪಾದಯಾತ್ರೆಯ ಮೂಲಕ ಕ್ರಮಿಸಿದರೆ, ಒಂದಿಷ್ಟು ಮಂದಿ ಮರಗಾಲನ್ನು ಕಟ್ಟಿಕೊಂಡು ಸಾಗುತ್ತಾರೆ. ಆದರೆ, ಅಪರೂಪವೆಂಬಂತೆ ನದಿ ಇಂಗಳಗಾಂವ ಗ್ರಾಮದ ಇವರಿಬ್ಬರು ಬಹಳ ಕಷ್ಟಕರವಾದ ದೀಡ ನಮಸ್ಕಾರ ಹಾಕುತ್ತಾ ತೆರಳುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.