ಜಿಲ್ಲೆ

ಅರಲವಾಡದಲ್ಲಿ ನಾಪತ್ತೆಯಾದವ ಹಟ್ಟಿಕೇರಿಯಲ್ಲಿ ಪತ್ತೆ

ಅಂಕೋಲಾ: ಕಳೆದ ಏಪ್ರಿಲ್‌ನಲ್ಲಿ ಹಳಿಯಾಳ ತಾಲೂಕಿನ ಅರಲವಾಡದಲ್ಲಿ ಗ್ರಾಮದೇವಿ ಜಾತ್ರೆ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿ ಹಟ್ಟಿಕೇರಿ ಟೋಲ್‌ಗೇಟ್ ಬಳಿ ಪತ್ತೆಯಾಗಿದ್ದಾನೆ. ವಾರಸುದಾರರು ಗುರುವಾರ ಆಗಮಿಸಿ ಮನೆಗೆ ಕರೆದುಕೊಂಡು ಹೋದರು.

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮದ ರವಿ ಅರ್ಜುನಪ್ಪ ಆರೇರ ಪತ್ತೆಯಾದ ವ್ಯಕ್ತಿ. 15ದಿನಗಳ ಹಿಂದೆ ಟೋಲ್‌ಗೇಟ್ ಬಳಿ ಬಂದಿದ್ದ ಈತನಿಗೆ ಟೋಲ್‌ಗೇಟ್ ಸಿಬ್ಬಂದಿ ನಿತ್ಯ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಂದ ಬುದ್ದಿಯಂತೆ ಕಂಡು ಬರುವ ಈತ ಬರೆದುಕೊಟ್ಟ ವಿಳಾಸ ಪತ್ತೆಗಾಗಿ ವಿನಾಯಕ ಕುಂಬಾರ ಎಂಬುವವರು ತಮ್ಮ ಸ್ನೇಹಿತ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಾಜಿ ಶಾಸಕರ ಆಪ್ತ ಸಹಾಯಕ ಮಲ್ಲು ಅವರನ್ನು ಸಂಪರ್ಕಿಸಿದ್ದರು. ರವಿ ಆರೇರ ಪೋಟೋವನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರಿಂದ ಮನೆಯ ವಿಳಾಸವನ್ನು ಪತ್ತೆ ಮಾಡಲು ಸಾಧ್ಯವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ರವಿಯ ಚಿಕ್ಕಮ್ಮ, ಧಾರವಾಡ ವೀರಾಪುರದ ಜಯಶ್ರೀ ಕಾಡೇನವರ ಅವರು ರವಿಯ ತಾಯಿ ರುದ್ರವ್ವ ಆರೇರ ಮತ್ತು ರುದ್ರವ್ವನ ಅಣ್ಣ ಆಗಮಿಸಿದ್ದರು. ಪೊಲೀಸರು ರವಿ ಮತ್ತು ಆತನ ತಾಯಿಯ ವಿಳಾಸವನ್ನು ಪರಿಶೀಲಿಸಿ ಜತೆಗೆ ಕಳುಹಿಸಿಕೊಟ್ಟಿದ್ದಾರೆ.

15ದಿನಗಳ ಕಾಲ ಊಟೋಪಚಾರ ಮಾಡಿ ವಿಳಾಸ ಪತ್ತೆ ಹಚ್ಚುವಲ್ಲಿ ಸ್ಥಳೀಯರಾದ ನವೀನ ಗಾಂವಕರ, ಪಾಂಡುರಂಗ ನಾಯ್ಕ, ವಿನಾಯಕ ಕುಂಬಾರ, ನಿತೀನ್ ನಾಯ್ಕ, ದರ್ಶನ ನಾಯ್ಕ, ಪ್ರಶಾಂತ ದುರ್ಗೇಕರ್, ಸಾಗರ ನಾಯ್ಕ, ರಾಜೇಶ ನಾಯ್ಕ, ವಿನೋದ ನಾಯ್ಕ, ಚಂದ್ರಹಾಸ ಭಂಡಾರಿ, ಮಂಜು ಗಾಂವಕರ ಸಹಕರಿಸಿದ್ದರು.