ಜಿಲ್ಲೆ

ಪಿಎಂ ಕಿಸಾನ್‌ ಸಂಬಂಧಿಸಿದ ಎಪಿಕೆ ಫೈಲ್ ಕ್ಲಿಕ್ ಮಾಡಿದ ವ್ಯಕ್ತಿಗೆ 1.12 ಲಕ್ಷ ರೂ. ವಂಚನೆ

ಶಿವಮೊಗ್ಗ: ವಾಟ್ಸ್‌ಆ್ಯಪ್‌ಗೆ ಬಂದ ಪಿಎಂ(ಪ್ರಧಾನಮಂತ್ರಿ) ಕಿಸಾನ್‌ಗೆ ಸಂಬಂಧಿಸಿದ ಎಪಿಕೆ ಫೈಲ್ ಕ್ಲಿಕ್ ಮಾಡಿದ ಸೊರಬದ ವ್ಯಕ್ತಿಯೊಬ್ಬರಿಗೆ 1.12 ಲಕ್ಷ ರೂ. ಆನ್‌ಲೈನ್ ಮೂಲಕ ವಂಚಿಸಲಾಗಿದೆ.

ಅ.15ರಂದು ಅಪರಿಚಿತ ಸಂಖ್ಯೆಯಿಂದ ಒಂದು ಸಂದೇಶ ಬಂದಿತ್ತು. ಆ ಸಂದೇಶದಲ್ಲಿ ಪಿಎಂ ಕಿಸಾನ್ ಎಪಿಕೆ ಫೈಲ್ ಇದ್ದುದ್ದನ್ನು ನೋಡಿದ ವ್ಯಕ್ತಿ, ಇದು ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಫೈಲ್ ಆಗಿರಬಹುದೆಂದು ಭಾವಿಸಿ ಅದನ್ನು ಕ್ಲಿಕ್ ಮಾಡಿದ್ದರು.

ನಂತರ, ಅಪರಿಚಿತ ವಂಚಕರು ಯಾವುದೋ ಮೂಲದಿಂದ ದೂರುದಾರರ ವೈಯಕ್ತಿಕ ಮಾಹಿತಿ ಕದ್ದು, ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ದೂರುದಾರರ ಗಮನಕ್ಕೆ ಬಾರದಂತೆ ಹಂತ ಹಂತವಾಗಿ 1,12,799 ರೂ. ಅನ್ನು ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ. ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.