ಬೆಂಗಳೂರು : ಬ್ಯಾಂಕ್ ಆಫ್ ಬರೋಡಾದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 12 ಕೋಟಿ ರೂ. ಸಾಲ ಪಡೆದು ವಂಚಿಸಿದ್ದ ಕೆ.ಎಸ್. ಸುಬ್ರಮಣ್ಯ ರೆಡ್ಡಿ ಎಂಬಾತನಿಗೆ ಸೇರಿದ 4.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ಜಪ್ತಿ ಮಾಡಿದೆ.
ಬ್ಯಾಂಕ್ ಆಫ್ ಬರೋಡಾ ಕೆಂಗೇರಿ ಶಾಖೆಯಲ್ಲಿ ಕೆ.ಎಸ್.ಸುಬ್ರಮಣ್ಯ ರೆಡ್ಡಿ ಸಾಲ ಪಡೆದು ವಂಚಿಸಿದ್ದ. ಪ್ರಕರಣದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಟಿ.ಎಲ್.ಪ್ರವೀಣ್ ಕುಮಾರ್ ಕೈವಾಡ ಗೊತ್ತಾಗಿ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸಿ ತನಿಖೆ ನಡೆಸಿದ್ದಾರೆ.
ಟಿ.ಎಲ್. ಪ್ರವೀಣ್ ಕುಮಾರ್, ತನ್ನ ಅವಧಿಯಲ್ಲಿ 186 ಚಿನ್ನದ ಸಾಲವನ್ನು ನೀಡಿದ್ದರು. ಅದರಲ್ಲಿ 57 ಸಾಲಗಳು ಕೆ.ಎಸ್.ಸುಬ್ರಮಣ್ಯ ರೆಡ್ಡಿಗೆ ಸೇರಿದ್ದು. ಇದಕ್ಕೆ 12 ಕೋಟಿ ರೂ. ಸಾಲ ನೀಡಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ರೆಡ್ಡಿ 12 ಕೋಟಿ ರೂ. ಸಾಲ ಪಡೆದು ಸಿಂಡಿಕೇಟ್ ಬ್ಯಾಂಕ್‌ನಲ್ಲಿದ್ದ ಇತರ ಸಾಲವನ್ನು ತೀರಿಸಿ ಅಡವಿಟ್ಟಿದ್ದ ಆಸ್ತಿ ದಾಖಲೆಗಳನ್ನು ಬಿಡಿಸಿಕೊಂಡಿದ್ದ. ಜತೆಗೆ ಇತರ ಕಡೆಗಳಲ್ಲಿ ಆಸ್ತಿಯನ್ನು ಖರೀದಿಸಿದ್ದ. ನಕಲಿ ಚಿನ್ನ ಅಡವಿಟ್ಟು ಪಡೆದಿದ್ದ ಸಾಲ ಮಾತ್ರ ತೀರಿಸಿಲ್ಲ. ಸಿಬಿಐ ನೀಡಿದ ವರದಿ ಆಧರಿಸಿ ಸುಬ್ರಮಣ್ಯ ರೆಡ್ಡಿಗೆ ಸೇರಿದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 5 ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.