ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಚಲುವರಾಯಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಎಚ್.ಸಿ.ಯೋಗೇಶ್, ಎಚ್.ಪಿ.ಗಿರೀಶ್ ಇತರರಿದ್ದರು. 
ಜಿಲ್ಲೆ

ಮಲೆನಾಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

Shivamogga - Desk - Praveena Kumar S

ಶಿವಮೊಗ್ಗ: ಮಲೆನಾಡಿನ ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಕ್ಕೆ ತಂದಿದ್ದಾರೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಸಚಿವರೊಂದಿಗೆ ಮುಂದಿನ ತಿಂಗಳು ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಲೆನಾಡಿನ ಬಗ್ಗೆ ಸಚಿವ ಮಧು ಬಂಗಾರಪ್ಪ ಗಂಭೀರವಾಗಿ ಚರ್ಚೆಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ಚರ್ಚೆ ಮಾಡಿದ್ದು ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದರು.
ಕಳೆದ ಬಾರಿಗಿಂತ ಈ ಬಾರಿ ರಾಜ್ಯದೆಲ್ಲೆಡೆ ಮಳೆ ಪ್ರಮಾಣ ಕಡಿಮೆಯಾಗಿದೆ. ರೈತರು ಬೀಜ ಬಿತ್ತನೆ ವಿಳಂಬ ಮಾಡಿದ್ದಾರೆ. ಸರ್ಕಾರ ರೈತರ ಬೆನ್ನೆಲುಬಾಗಿ ನಿಂತಿದ್ದು, ಯಾರೂ ಆತಂಕ ಪಡುವುದು ಬೇಡ. ಈ ಬಾರಿ ರೈತರ ಪರವಾಗಿ ಬಜೆಟ್ ಮಂಡಿಸಲಾಗಿದೆ. ಇದನ್ನು ಸಹಿಸಲಾಗದೆ ನೆಪವೊಡ್ಡಿ ಪ್ರತಿಪಕ್ಷಗಳು ಸದನವನ್ನೇ ಬಹಿಷ್ಕರಿಸಿದ್ದಾರೆ ಎಂದು ದೂರಿದರು.
ಸದನದಲ್ಲಿ ಪ್ರತಿಪಕ್ಷಗಳಿಗೆ ನಾಯಕರಿಲ್ಲ. ಪ್ರತಿಪಕ್ಷ ನಾಯಕ ಸ್ಥಾನವನ್ನು ಸದನ ಆರಂಭದ ದಿನಗಳಲ್ಲೇ ಆಯ್ಕೆ ಮಾಡಬೇಕಿತ್ತು. ಸದನ ಮುಗಿಯುತ್ತ ಬಂದರೂ ಆಯ್ಕೆಯಾಗಿಲ್ಲ. ಇದು ಅವರ ಯೋಗ್ಯತೆ ಏನೆಂದು ಹೇಳುತ್ತದೆ. ಬಜೆಟ್ ಅಧಿವೇಶನ ಮತ್ತು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮುಗಿದರೂ ಬಿಜೆಪಿಗೆ ಇನ್ನೂ ಪ್ರತಿಪಕ್ಷ ನಾಯಕನ ಸ್ಥಾನ ತುಂಬಲಾಗಲಿಲ್ಲ. ಇದು ಕರ್ನಾಟಕದ ದುರಾದೃಷ್ಟ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ವಕ್ತಾರ ಬಿ.ಎ.ರಮೇಶ್ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ 4 ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಮೂರು ಕಡೆ ಅಡಕೆ ಸಂಶೋಧನಾ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ವಿವಿ ಇದ್ದರೂ ಎಲೆಚುಕ್ಕೆ ರೋಗಕ್ಕೆ ಔಷಧಿ ಕಂಡು ಹಿಡಿಯಲಾಗಿಲ್ಲ. ತಕ್ಷಣ ಈಗಿನ ಸರ್ಕಾರ ಅಡಕೆ ಮತ್ತು ಭತ್ತ ಬೆಳೆಗಾರರ ಉಳಿಸಲು ಔಷಧ ಸಿಂಪಡಣೆಗೆ 2.5 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಚಂದ್ರಭೂಪಾಲ್, ಮುಖಂಡ ನಗರದ ಮಹಾದೇವಪ್ಪ, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ರೇಖಾ ರಂಗನಾಥ್, ಎಚ್.ಪಿ.ಗಿರೀಶ್ ಮತ್ತಿತರರಿದ್ದರು.