ಜಿಲ್ಲೆ

ಜನಸೇವೆಯಿಂದ ಜನಮಾನಸದಲ್ಲಿ ಶಾಶ್ವತ ನೆಲೆ

ರಾಜಣ್ಣ

ಹಲಗೂರು: ರಾಜಕೀಯ ಮಾಡುವಾಗ ಪ್ರಾಮಾಣಿಕತೆ, ವಾಸ್ತವಿಕತೆಯನ್ನು ಅರಿತು ರಾಜಕಾರಣದಲ್ಲಿ ಪರಿಣಾಮಕಾರಿಯಾಗಿ ಜನಸೇವೆ ಮಾಡಿದರೆ ನಾವು ಸತ್ತ ಮೇಲೂ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತೇವೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.


ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್‌ನಿಂದ ನಿರ್ಮಿಸಲಿರುವ ಅಂದಾಜು 2.25 ಕೋಟಿ ರೂ. ವೆಚ್ಚದ ಹೆಚ್ಚುವರಿ ಎಂಟು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಹಲಗೂರಿನ ಜೂನಿಯರ್ ಕಾಲೇಜಿಗೆ ಒಂದು ಕಾಲು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಅದರ ಭೂಮಿಪೂಜೆ ತಕ್ಷಣದಲ್ಲೇ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಯೋಜನೆ, ನೀರಾವರಿ, ಮುಂತಾದ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ನನ್ನ ಬೇಡಿಕೆಯನ್ನು ಮನ್ನಿಸಿ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಸಮುದಾಯ ಆರೋಗ್ಯ ಕೇಂದ್ರ ಈ ಭಾಗದ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಲು ಪರಿಣಾಮಕಾರಿ ಪ್ರಯತ್ನವಾಗಿದೆ ಎಂದರು.


ನಾವ್ಯಾರು ಶಾಶ್ವತವಲ್ಲ, ಈ ದಿಕ್ಕಿನಲ್ಲಿ ನಾವು ಸಾಗಿ ಭವಿಷ್ಯದಲ್ಲಿ ಜನ, ಜಾನುವಾರುಗಳಿಗೆ ಒಳಿತನ್ನು ಮಾಡಿ, ಪ್ರಕೃತಿಯನ್ನು ರಕ್ಷಿಸಿ, ದೇಶದ ಸಂಪತ್ತನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ. ರಾಜಕೀಯದಲ್ಲಿ ಏಳು- ಬೀಳು ಸಾಮಾನ್ಯ, ಎಲ್ಲರೂ ಸಾಧನೆ ಮಾಡಲು ಸಾಧ್ಯವಿಲ್ಲ. ಯೋಗ್ಯತೆ ಇರುವವರು ಮಾತ್ರ ಸಾಧನೆ ಮಾಡುತ್ತಾರೆ ಎಂದರು.


ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಬಹಳ ವರ್ಷಗಳಿಂದಲೂ ನನೆಗುದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ವಿಶೇಷ ಅನುದಾನ ತಂದು ಪೂರ್ಣಗೊಳಿಸುವಂತೆ ದಲಿತ ಮುಖಂಡರು ಮನವಿ ಮಾಡಿದರು.


ಮನವಿಗೆ ಸ್ಪಂದಿಸಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ , ಅಪೂರ್ಣಗೊಂಡಿರುವ ಸಮುದಾಯ ಭವನದ ಕಾಮಗಾರಿಯನ್ನು ವಿಶೇಷ ಅನುದಾನ ತಂದು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ರಕ್ಷಿತಾ ಜೀವನಕುಮಾರ್, ಉಪಾಧ್ಯಕ್ಷೆ ಲತಾ ಮಹಾದೇವ, ಪ್ರಾಂಶುಪಾಲ ಆಲಂಗೂರು ಮಂಜುನಾಥ್, ಪಿಡಿಒ ರುದ್ರಯ್ಯ, ಹೌಸಿಂಗ್ ಬೋರ್ಡ್ ಎಇಇ ಲಾರೆನ್ಸ್, ರಕ್ಷಾ ವೆಂಚರ್ ತೇಜಸ್, ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಎಚ್.ವಿ.ಅಶ್ವಿನ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸದ್ರುಲ್, ಶಶಿಕಲಾ, ಜಮೀಲ್, ಲಿಯಾಕತ್ ಅಲಿ ಹಾಗೂ ಮುಖಂಡರಾದ ಎಚ್.ವಿ.ಪದ್ಮನಾಬ್, ರಾಜಣ್ಣ, ಸಾಗ್ಯ ಕೆಂಪಯ್ಯ, ನಾಗಸಿದ್ದಯ್ಯ, ರವಿ, ಗೋಪಾಲ, ವೆಂಕಟೇಶ್, ಶ್ರೀನಿವಾಸಾಚಾರಿ ಮತ್ತಿತರರಿದ್ದರು.