ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕಡಲ್ಕೊರೆತ ತಡೆಯುವ ಉದ್ದೇಶದಿಂದ ಗಂಗೊಳ್ಳಿ ಬಂದರು ಬೇಲಿಕೇರಿ ಮತ್ತು ಖಾರ್ವಿಕೇರಿ ಕಡಲ ತೀರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಶಾಶ್ವತ ತಡೆಗೋಡೆ ಕುಸಿಯಲಾರಂಭಿಸಿದೆ. ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯ ಬಂದರು ಬೇಲಿಕೇರಿ ಹಾಗೂ ಖಾರ್ವಿಕೇರಿ ಪ್ರದೇಶದಲ್ಲಿ ಕಡಲ್ಕೊರೆತ ತಡೆಯುವ ಉದ್ದೇಶದಿಂದ ತಲಾ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾಶ್ವತ ತಡೆಗೋಡೆ ಕುಸಿಯುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಆರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಬಂದರು ಬೇಲಿಕೇರಿ ಪ್ರದೇಶದ ಕಡಲ್ಕೊರೆತ ತಡೆಗೋಡೆ ಉತ್ತರ ದಿಕ್ಕಿನಲ್ಲಿ ಕಲ್ಲುಗಳು ಕುಸಿದು ಕಡಲ ಒಡಲು ಸೇರಲಾರಂಭಿಸಿದೆ. ತಡೆಗೋಡೆ ಕಲ್ಲುಗಳು ಕಡಲ ತೀರದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿದ್ದಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ತಡೆಗೋಡೆ ನಿರ್ಮಾಣ ಸಂದರ್ಭದಲ್ಲೇ ಕಳಪೆ ಕಾಮಗಾರಿ ಆರೋಪ ಕೇಳಿಬಂದಿತ್ತು. ಶಾಶ್ವತ ತಡೆಗೋಡೆ ನಿರ್ಮಾಣದ ಬಳಿಕ ಕಡಲ್ಕೊರೆತ ಸಮಸ್ಯೆ ಶಾಶ್ವತವಾಗಿ ಬಗೆಹರಿಯಬಹುದು ಎಂಬ ವಿಶ್ವಾಸದಲ್ಲಿದ್ದ ಸ್ಥಳೀಯರಿಗೆ ತಡೆಗೋಡೆ ಕುಸಿತ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಾಮಗಾರಿ ಪೂರ್ಣಗೊಂಡ ಆರೇ ವರ್ಷದಲ್ಲಿ ತಡೆಗೋಡೆ ಕುಸಿಯುತ್ತಿರುವುದು ಕಳಪೆ ಕಾಮಗಾರಿಗೆ ಸ್ಪಷ್ಟ ನಿದರ್ಶನ. ಶಾಶ್ವತ ತಡೆಗೋಡೆ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂ. ಅನುದಾನ ಕೊಳ್ಳೆ ಹೊಡೆಯಲಾಗಿದೆ. ಆರಂಭದಿಂದಲೂ ಕಾಮಗಾರಿ ಬಗ್ಗೆ ಅಪಸ್ವರ ಕೇಳಿ ಬಂದಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಿಲ್ಲ.-ಚಂದ್ರ ಖಾರ್ವಿ ಗಂಗೊಳ್ಳಿ ಲೈಟ್‌ಹೌಸ್ ನಿವಾಸಿ