A perfect opportunity to eliminate the violent patron 
ಜಿಲ್ಲೆ

ಉಗ್ರ ಪೋಷಕನ ನಿರ್ನಾಮಕ್ಕೆ ಸೂಕ್ತ ಅವಕಾಶ

ಬೀಳಗಿ: ಪಹಲ್ಗಾಮ್ ದಾಳಿಯ ಪ್ರತೀಕಾರದಲ್ಲಿ 26 ಜನ ಅಮಾಯಕರನ್ನು ಕೊಂದ ಉಗ್ರರಿಗೆ ತಕ್ಕ ಉತ್ತರ ನೀಡಿದ ನಮ್ಮ ದೇಶದ ಸೈನಿಕರಿಗೆ ಒಂದು ಸಲಾಂ ಹಾಗೂ ಪ್ರಧಾನಿ ಮೋದಿಯವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದ ಉಗ್ರರ ತಾಣಗಳನ್ನು ಹಾಗೂ ಉಗ್ರ ಪೋಷಕ ಪಾಕಿಸ್ತಾನವನ್ನು ನಿರ್ನಾಮ ಮಾಡಲು ಇದು ಸೂಕ್ತ ಅವಕಾಶ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ. ಪಾಟೀಲ ತಿಳಿಸಿದರು.

ಸ್ಥಳೀಯ ಶ್ರೀ ಸಿದ್ಧೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್ ಸಭಾಭವನದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಮೂಲಕ 9 ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿ ನೂರಾರು ಉಗ್ರರನ್ನು ಉಡೀಸ್ ಮಾಡಿದ ನಮ್ಮ ದೇಶದ ದಿಟ್ಟ ಕಾರ್ಯಾಚರಣೆಯಿಂದ ನಮಗೆ ಸಂತೋಷವಾಗಿದೆ. ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಮಾತ್ರ ದಾಳಿ ಮಾಡಿದರಿಂದ ನಮ್ಮ ದೇಶಕ್ಕೆ ವಿಶ್ವದ ಬೆಂಬಲ ಸಿಕ್ಕಿದೆ. ಈ ಕಾರ್ಯಾಚಾರಣೆ ಮಾಹಿತಿಯನ್ನು ಜಗತ್ತಿಗೆ ತಿಳಿಸುವ ಹೊಣೆಗಾರಿಕೆ ಹೊತ್ತಿದ್ದ ಇಬ್ಬರು ಮಹಿಳಾ ಸೇನಾಧಿಕಾರಿಗಳ ಕಾರ್ಯದ ಬಗ್ಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ಈ ಅವಕಾಶ ಬಳಸಿಕೊಂಡು ಪಿಒಕೆಯನ್ನು ಸಂಪೂರ್ಣವಾಗಿ ನಮ್ಮ ವಶಕ್ಕೆ ಪಡೆದುಕೊಳ್ಳಬೇಕಾಗಿದೆ. ಇದಕ್ಕಾಗಿ ಯುದ್ಧ ನಡೆದುರೂ ಚಿಂತೆ ಇಲ್ಲ. ಪ್ರಧಾನಿ ಮೋದಿಯವರು ದೇಶದ ರಕ್ಷಣೆಗೆ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ, ಪಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ಗ್ಯಾರೆಂಟಿ ಯೋಜನೆ ಸಮಿತಿ ತಾಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ತಾಪಂ ಮಾಜಿ ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಪಪಂ ಸದಸ್ಯ ಪಡಿಯಪ್ಪ ಕಳ್ಳಿಮನಿ, ರಾಜು ಬೋರ್ಜಿ, ಬಸವರಾಜ ಹಳ್ಳದಮನಿ, ಸಂಗಪ್ಪ ಕಂದಗಲ್ಲ, ಸಿದ್ದು ಸಾರಾವರಿ, ಶಿವಾನಂದ ಮಾದರ, ಬಿ.ಪಿ.ಪಾಟೀಲ ಮತ್ತಿತರರಿದ್ದರು.