ಕೆಂಜಗಾಪುರದ ಶ್ರೀವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಶ್ರಾವಣ ಮಾಸದ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಡಾ. ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಳಕೋಡು ಹಾಲಸ್ವಾಮಿ ಗೌಡ, ಶಾಂತಕುಮಾರ ಗೌಡ, ಕೆ.ಆರ್.ರಾಜು, ಪ್ರಮೀಳಮ್ಮ, ಶಿವಲಿಂಗಯ್ಯ ಶಾಸ್ತ್ರಿ ಇತರರಿದ್ದರು. 
ಜಿಲ್ಲೆ

ಶ್ರದ್ಧೆ, ಭಕ್ತಿ ಇದ್ದರೆ ನೆಮ್ಮದಿ ಬದುಕು ಸಾಧ್ಯ

Shivamogga - Desk - Megha MS

ಆನಂದಪುರ: ಮಳೆ ಕಡಿಮೆಯಾಗಿ ರಾಜ್ಯದಲ್ಲಿ ಬರಗಾಲದ ಛಾಯೆ ಎದುರಾಗಿದ್ದು, ಭವಿಷ್ಯದ ಬಗ್ಗೆ ಎಲ್ಲರಲ್ಲೂ ಆತಂಕ ಮೂಡಿದೆ. ದೈವ ಭಕ್ತಿ ಮತ್ತು ಸದಾಚಾರದ ನಡತೆಯ ಬರಗಾಲ ಸಹ ಎಲ್ಲೆಡೆ ವ್ಯಾಪಿಸಿದ್ದು ಬದುಕನ್ನು ಭೀಕರಗೊಳಿಸುತ್ತಿದೆ ಎಂದು ಮುರುಘಾ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಸೋಮವಾರ ಸಮೀಪದ ಕೆಂಜಗಾಪುರದ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಪೂಜೆ ಮತ್ತು ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರದ್ಧೆ ಮತ್ತು ಭಕ್ತಿ ಇದ್ದರೆ ಶಾಂತಿಯುತ ನೆಮ್ಮದಿಯ ಬದುಕು ಕಾಣಬಹುದು. ದೇವರನ್ನು ಸದಾ ಸ್ಮರಿಸುತ್ತ ಯಾರು ಆರಾಧಿಸುವರೋ ಅವರ ಮನಸ್ಸು ಪ್ರಫುಲ್ಲವಾಗಿರುತ್ತದೆ. ಆಧುನಿಕತೆ ಮಾರುಹೋಗುತ್ತಿರುವ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಮಾನವೀಯ ಗುಣಗಳು ನಶಿಸುತ್ತಿರುವ ಕಾರಣ ನಮ್ಮ ಸತ್ವ ಪರೀಕ್ಷೆಗೆ ಪ್ರಕೃತಿ ಬರಗಾಲದಂತಹ ವಾತಾವರಣ ಸೃಷ್ಠಿಸುತ್ತದೆ ಎಂದರು.
ಸದಾ ಧನಾತ್ಮಕ ಮನೋಭಾವ ಮತ್ತು ಪರೋಕರಾದ ಬಗ್ಗೆ ಯಾರು ಯೋಚಿಸುವರೋ ಅವರು ಎಂತಹ ಬರಗಾಲ ಬಂದರೂ ಮಾನಸಿಕವಾಗಿ ಸದೃಢರಾಗಿ ಇರುತ್ತಾರೆ ಎಂದರು.
ದೇವಾಲಯ ಸಮಿತಿಯ ಪ್ರಮುಖರಾದ ಬೆಳಕೋಡು ಹಾಲಸ್ವಾಮಿ ಗೌಡ, ಆಚಾಪುರ ಶಾಂತಕುಮಾರ ಗೌಡ, ಆಚಾಪುರದ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರಾಜು, ಗಿಣಿವಾರದ ಪ್ರಮೀಳಮ್ಮ, ಶಿವಲಿಂಗಯ್ಯ ಶಾಸ್ತ್ರಿ, ಆಲುವಳ್ಳಿ ಪುಟ್ಟಸ್ವಾಮಿ ಗೌಡ, ಪ್ರಧಾನ ಅರ್ಚಕ ಗಂಗಾಧರಪ್ಪ, ಗಿರೀಶ ಕೆರೆಹಿತ್ತಲು ಇತರರಿದ್ದರು.