ಶಶಿಕುಮಾರ್.ಎ.ಶಿಡ್ಲಟ್ಟ
ಕೃಷಿಯ ಮೇಲಿನ ಆಸಕ್ತಿ ಹಾಗೂ ಕಠಿಣ ಶ್ರಮ ರೂಡಿಸಿಕೊಂಡಿರುವ ದಂಪತಿಗಳು ವೈಜ್ಞಾನಿಕ ರೀತಿಯಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮಾಡುವ ಮೂಲಕ ಲಾಂತರ ಹಣ ದುಡಿದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ತಾಲೂಕಿನ ದಿಬ್ಬೂರಹಳ್ಳಿ ರಸ್ತೆಯ ಮಲ್ಲಹಳ್ಳಿಯ ಶಿವಕುಮಾರ್ ದ್ವೀತಿಯ ಪಿಯುಸಿ ವ್ಯಾಸಂಗ ಮಾಡಿದ್ದು, ಕೃಷಿಯೇ ಜೀವನ ಎಂಬುದನ್ನು ನಂಬಿ ತನಗಿರುವ ಒಂದೂವರೆ ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ತೋಟ, ತೋಟದ ಮಧ್ಯೆ ಹುಳು ಮನೆ ನಿರ್ಮಿಸಿ ವರ್ಷಕ್ಕೆ ಸರಿ ಸುಮಾರು 9ರಿಂದ 10 ರೇಷ್ಮೆ ಬೆಳೆ ಬೆಳೆಯುವ ಮೂಲಕ ರೇಷ್ಮೆ ಬೆಳೆಗಾರರಿಗೆ ಮಾದರಿಯಾಗಿದ್ದಾರೆ.
ಶಿವಕುಮಾರ್ ಮೂಲತ@ ರೈತ ಕುಟುಂಬದಲ್ಲಿ ಜನಿಸಿದ್ದು, ಚಿಕ್ಕಂದಿನಿಂದಲೇ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು. ಇವರ ಪತ್ನಿ ನಿರ್ಮಲಾ ಸಹ ಕೃಷಿಯಲ್ಲೇ ತೊಡಗಿಸಿಕೊಂಡಿದ್ದಾರೆ.ಇವರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು 3500 ಹಿಪ್ಪುನೇರಳೆ ಗಿಡಗಳನ್ನು ನರೇಗಾ ಯೋಜನೆಯಡಿ 8*3 ಅಂತರದಲ್ಲಿ ನಾಟಿ ಮಾಡಿದ್ದು, ಹಿಪ್ಪುನೇರಳೆ ಗಿಡಗಳ ನಡುವೆ ಅಂತರ ಬೆಳೆಯಾಗಿ ಹುರುಳಿಯನ್ನು ಮಲ್ಚಿಂಗ್ ಮಾಡುವ ಮೂಲಕ ತೋಟದ ಮಣ್ಣಿನ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ. ತೋಟದ ಸುತ್ತಲೂ ಸಿಲ್ವರ್ ಹಾಗೂ ಅಡಿಕೆ ಮರಗಳನ್ನು ನೆಟ್ಟಿದ್ದಾರೆ. ನೀರಿಗಾಗಿ 3 ಕೊಳವೆ ಬಾವಿ ಇದೆ. ಹುಳು ಮನೆಗೆ ಮಳೆ ಕೊಯ್ಲು ಮೂಲಕ ಶೇಖರಣೆ ಯಾಗುವ ನೀರು ಹಾಗೂ ತ್ಯಾಜ್ಯ ನೀರು ಸಂಗ್ರಹಿಸಲು ಸೋಕ್ ಪಿಟ್ ನಿರ್ಮಿಸಿದ್ದು, ಇದರಿಂದ ಮನೆಯ ಹಿಂದೆ ಒಂದಷ್ಟು ಮಾವು, ನೇರಳೆ, ಏಳಿಕಾಯಿ ಹಾಗೂ ಬಾಳೆ ಗಿಡಗಳನ್ನು ಪೋಷಿಸುತ್ತಿದ್ದಾರೆ.
ಬಿತ್ತನೆ ರೇಷ್ಮೆ ಗೂಡು ಬೆಳೆಯುವುದೇ ವಿಶೇಷ
ಸಾಮಾನ್ಯವಾಗಿ ಇಲ್ಲಿನ ಬಹುತೇಕ ಬೆಳೆಗಾರರು ರೇಷ್ಮೆ ಗೂಡು ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರಾದರೂ ಶಿವಕುಮಾರ್ ರೇಷ್ಮೆ ತಳಿಗಳಾದ ಎಫ್ಸಿ 1 ಹಾಗೂ ಎಫ್ಸಿ 2 ತಳಿ ಬಿತ್ತನೆ ಗೂಡನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸುಮಾರು 200 ಮೊಟ್ಟೆಗೆ 150&160 ಕೆಜಿ ಗೂಡು ಬೆಳೆಯುತ್ತಾರೆ. ಬೆಳೆದ ಗೂಡನ್ನು ನೆರೆಯ ವಿಜಯಪುರದ ಕೇಂದ್ರ ರೇಷ್ಮೆ ಮಂಡಳಿಯವರು ಕೆಜಿಗೆ 1300 ರೂ. ಬೆಲೆ ನಿಗದಿ ಪಡಿಸಿ ಖರೀದಿಸಿ ಇದರಿಂದ ಮತ್ತೊಮ್ಮೆ ಮೊಟ್ಟೆ ಮಾಡಿ ರೇಷ್ಮೆ ಬೆಳೆಗಾರರಿಗೆ ನೀಡುತ್ತಾರೆ. ತಿಂಗಳಿಗೆ 200 ಮೊಟ್ಟೆ ಬೆಳೆಯುವ ಇವರು ಸರಾಸರಿ 150&160 ಕೆಜಿ ಗೂಡು ಬೆಳೆಯುತ್ತಾರೆ. ಕೆಜಿ ಗೂಡಿಗೆ 1300 ರೂ.ಗಳಾದರೆ 160 ಕೆಜಿಗೆ 2 ಲಕ್ಷದ 8 ಸಾವಿರ ಗಳಿಸುತ್ತಿದ್ದು, ಖರ್ಚು, ಕೂಲಿ ಆಳುಗಳ ವೆಚ್ಚ ಎಲ್ಲ ಹೋದರೂ ತಿಂಗಳೊಂದಕ್ಕೆ ಒಂದೂವರೆ ಲಕ್ಷ ಉಳಿಸುತ್ತಾರೆ. ಇದರ ಹೊರತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬೇಡಿಕೆಯಿರುವ ಎಸ್ಕೆ 7 ಎಂಬ (ಬಿಳಿಗೂಡು) ಬಿತ್ತನೆ ಗೂಡನ್ನು ವರ್ಷದಲ್ಲಿ ಒಂದೆರಡು ಬೆಳೆ ಬೆಳೆಯುವುದು ವಿಶೇಷ.
ಹೈನುಗಾರಿಕೆ
ಇಷ್ಟೆಲ್ಲಾ ಕೆಲಸಗಳ ನಡುವೆಯೂ ಮನೆಯಲ್ಲಿ ಎರಡು ಸೀಮೆ ಹಸು ಹಾಗೂ ಒಂದು ಎಮ್ಮೆ ಸಾಕಿದ್ದಾರೆ. ಮೇವಿಗೆ ಸಮಸ್ಯೆಯಿಲ್ಲವಾದರೂ ಬೂಸಾ, ಹಿಂಡಿ ಚಕ್ಕೆ ಇನ್ನಿತರ ಮೇವಿನ ಪದಾರ್ಥ ಕೊಂಡು ತಂದು ಪೋಷಿಸುವ ಇವರು, ಇದರಿಂದ ದಿನವೊಂದಕ್ಕೆ ಸುಮಾರು 30&35 ಲೀ ಹಾಲು ಉತ್ಪಾದನೆ ಮಾಡಿ ಗ್ರಾಮದ ಡೇರಿಗೆ ಹಾಕುತ್ತಾರೆ.
ಅಡಿಕೆ ಮರದ ಮೇಲಿನ ಆಸಕ್ತಿ
ಮನೆಯ ಹಾಗೂ ಮನೆಯ ಮುಂಭಾಗದಲ್ಲಿರುವ ಹಿಪ್ಪುನೇರಳೆ ತೋಟದ ಅಂಚಿನಲ್ಲಿ ಸುಮಾರು 18 ಅಡಿಕೆ ಮರ ಹಾಕಿದ್ದು, ಕಳೆದ ವರ್ಷ ಇದರಿಂದ 60 ಕೆಜಿ ಅಡಿಕೆ ಬಂದಿದ್ದು, ಸುಮಾರು 30 ಸಾವಿರ ಆದಾಯ ಬಂದಿತ್ತು. ಇದರಿಂದ ಮತ್ತಷ್ಟು ಪ್ರೇರಿತರಾದ ಇವರು ತನ್ನ ಪತ್ನಿ ನಿರ್ಮಲಾ ಅವರ ಹೆಸರಿನಲ್ಲಿರುವ ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು 800 ಅಡಿಕೆ ಮರಗಳನ್ನು ಕಳೆದ ಎರಡು ವರ್ಷದ ಹಿಂದೆ ನೆಟ್ಟಿದ್ದು, ಮೂರು ವರ್ಷದಲ್ಲಿ ಇದರಿಂದಲೂ ಆರ್ಥಿಕ ಲಾಭ ಪಡೆಯಲಿದ್ದಾರೆ.
ರೇಷ್ಮೆ ಇಲಾಖೆಯ ಸವಲತ್ತು
ಇಲಾಖೆಯಿಂದ ಹುಳು ಮನೆ ನಿರ್ಮಾಣಕ್ಕೆ 75 ಸಾವಿರ ಸಹಾಯಧನ, ಹಿಪ್ಪುನೇರಳೆ ತೋಟಕ್ಕೆ ಹನಿ ನೀರಾವರಿ ಅಳವಡಿಸಲು 34 ಸಾವಿರ ಸಹಾಯಧನ, ನರೇಗಾ ಯೋಜನೆಯಿಂದ 3300 ಸಸಿ ಉಚಿತ ಹಾಗೂ 50 ಸಾವಿರ ಸಹಾಯಧನ, ಇನ್ನುಳಿದಂತೆ ಸೆಯರ್, ಚಾಪ್ ಕಟ್ಟರ್, ಸೋಲಾರ ಮತ್ತಿತರ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ.
ಸುಸಜ್ಜಿತ ಮನೆ, ಮನೆಯೊಡತಿ, ಮುದ್ದಿನ ಮೂರು ಮಕ್ಕಳು, ಬೈಕು, ಕಾರು, ಟ್ರಾ$್ಯಕ್ಟರ್ ಇವೆಲ್ಲದಕ್ಕೂ ಹೆಚ್ಚಾಗಿ ನೆಮ್ಮದಿಯ ಜೀವನ ದೊರೆತಿದೆ. ರೇಷ್ಮೆ ಬೆಳೆ ಬೆಳೆಯಲು ಬೇಕಾದ ಒಂದು ತಿಂಗಳ ಅವಧಿಯಲ್ಲಿ ಬಹುತೇಕ ನಾನು ಹಾಗೂ ಪತ್ನಿ ನಿರ್ಮಲಾ ಇಬ್ಬರೇ ನೋಡಿಕೊಳ್ಳುತ್ತೇವೆ. ನಾಲ್ಕನೇ ಜ್ವರಕ್ಕೆ ಬಂದ ನಂತರ ಹುಳು ಹಾಯಲು ಹಾಗೂ ಗೂಡು ಬಿಡಿಸಲು 4&5 ಮಹಿಳಾ ಆಳುಗಳನ್ನು ಮಾತ್ರ ಇಟ್ಟುಕೊಳ್ಳುತ್ತೇವೆ. ಒಟ್ಟಾರೆ ಕೃಷಿ ಹಾಗೂ ರೇಷ್ಮೆ ಬೆಳೆಯಿಂದ ವಾರ್ಷಿಕ 10 ಲಕ್ಷಕ್ಕೂ ಹೆಚ್ಚು ಉಳಿತಾಯ ಮಾಡುತ್ತೇನೆ. ಮೂರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಗುರಿ ಹೊಂದಿದ್ದೇನೆ.
ಎಂ.ಶಿವಕುಮಾರ್, ರೇಷ್ಮೆ ಬೆಳೆಗಾರ, ಶಿಡ್ಲಟ್ಟ
ತಾಲೂಕಿನ ಕಸಬಾ ಹೋಬಳಿಯ ಮಲ್ಲಹಳ್ಳಿಯ ಎಂ.ಶಿವಕುಮಾರ್ ರೇಷ್ಮೆ ಇಲಾಖೆಯಿಂದ ತಾಂತ್ರಿಕ ಮಾಹಿತಿ ಪಡೆಯುವ ಜತೆಗೆ ನರೇಗಾ ಯೋಜನೆಯಡಿ 1 ಎಕರೆ 16 ಗುಂಟೆ ಜಮೀನಿನಲ್ಲಿ ಗುಣಮಟ್ಟದ ಹಿಪ್ಪುನೇರಳೆ ತೋಟ ಅಭಿವೃದ್ಧಿ ಪಡಿಸಿದ್ದು, ಇಲಾಖೆಯಿಂದ ಸಿಗುವ ಎಲ್ಲ ಸವಲತ್ತುಗಳ ಸದುಪಯೋಗ ಪಡೆದುಕೊಂಡಿದ್ದಾರೆ. ವೈಜ್ಞಾನಿಕ ರೇಷ್ಮೆ ಕೃಷಿ ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ದ್ವಿತಳಿ ಮತ್ತು ಬಿತ್ತನೆ ಗೂಡು ಬೆಳೆದು ಪ್ರಗತಿಪರ ರೇಷ್ಮೆ ಬೆಳೆಗಾರರಾಗಿ ಗುರುತಿಸಿಕೊಂಡಿರುವುದು ಸಂತಸದ ಸಂಗತಿ.
ಕೆ.ತಿಮ್ಮರಾಜು, ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ