ವಿಜಯವಾಣಿ ಸುದ್ದಿಜಾಲ ಆನೇಕಲ್
ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಹೇಳಿದರು.
ಚಂದಾಪುರ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಮತ್ತು ಸೌಹಾರ್ದ ಸಭೆಯಲ್ಲಿ ಮಾತನಾಡಿದರು.
ಯಾವುದೇ ಕಾರ್ಯಕ್ರಮ ಆಯೋಜಿಸಲು ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರ ಸಹಕಾರ ಮುಖ್ಯ. ಈ ಬಾರಿ ಗಣೇಶ ಉತ್ಸವ ಹಾಗೂ ಈದ್ ಮಿಲಾದ ಹಬ್ಬ ಒಂದೇ ಬಾರಿಗೆ ಬಂದಿದ್ದು, ಕಾರ್ಯಕ್ರಮ ಆಯೋಜನೆ ಮಾಡುವವರು ಹೆಚ್ಚಿನ ಸಹಕಾರ ನೀಡಬೇಕು ಎಂದು ಹೇಳಿದರು.
ಗಣೇಶಮೂರ್ತಿ ಪ್ರತಿಷ್ಠಾಪಿಸುವ ಪ್ರತಿಯೊಬ್ಬರೂ ಪುರಸಭೆ, ಪೊಲೀಸ್ ಠಾಣೆ ಮತ್ತು ಬೆಸ್ಕಾಂನಿಂದ ಅನುಮತಿ ಪಡೆಯಬೇಕು. ರಾತ್ರಿ 10ರ ನಂತರ ಡಿಜೆ ಬಳಸಬಾರದು. ಯಾರಿಗೂ ತೊಂದರೆ ಆಗದೆ ಇರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿ ಎಂದು ಸಲಹೆ ನೀಡಿದರು.
ಗಣಪತಿಯನ್ನು ಸ್ಥಾಪನೆ ಮಾಡುವವರು ಪಿಒಪಿ ಗಣಪತಿ ಬದಲಿಗೆ ಮಣ್ಣಿನ ಗಣಪತಿಯನ್ನು ಬಳಸಿ, ಪರಿಸರ ಉಳಿವಿಗೆ ಕೈಜೋಡಿಸಬೇಕು ಎಂದರು.
ತಹಸೀಲ್ದಾರ್ ಶಶಿಧರ್ ಮಾಡ್ಯಾಳ್ ಮಾತನಾಡಿ, ಮನೆಯಲ್ಲೂ ಪರಿಸರ ಪ್ರೇಮಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬೇಕು ಎಂದರು.
ಎಎಸ್ಪಿ ಎಂ.ಎಲ್ ಪುರುಷೋತ್ತಮ್, ಡಿವೈಎಸ್‌ಪಿ ಎನ್.ಗೋಪಾಲ ನಾಯಕ್, ಸಿಪಿಐ ಗಳಾದ ಕೆ.ವಿಶ್ವನಾಥ್, ಮಂಜುನಾಥ್, ಚಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ರಾಜೇಶ್, ಶ್ವೇತಾಬಾಯಿ, ರಾಜೇಂದ್ರ, ನಗರಸಭೆ ಆಯುಕ್ತ ನರಸಿಂಹಮೂರ್ತಿ, ಅಧಿಕಾರಿ ವರ್ಗದವರಾದ ಡಿ.ಸಿ.ಲೊಕೇಶ್, ಜಿ.ಎಸ್.ಮಂಜುನಾಥ್, ಶುಭಾ ಇತರರು ಇದ್ದರು.