| ವಿಶೇಷ ವರದಿ ಪಾವಗಡ
ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಪಿಂಚಣಿ ಬಯಸಿದ 150 ಅಶಕ್ತರಿಗೆ ಕಂದಾಯ ಇಲಾಖೆ ನೋಟಿಸ್ ನೀಡಿ ಕಚೇರಿಗೆ ಕರೆಸಿಕೊಳ್ಳುತ್ತಿರುವುದು ಆಶ್ಚರ್ಯ ಮೂಡಿಸಿದೆ. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಪಾವಗಡ ತಾಲೂಕು ಗ್ರೇಡ್-2 ತಹಸೀಲ್ದಾರ್ ಸುಮತಿ, ತಾಲೂಕಿನಲ್ಲಿ ಅರ್ಜಿ ಸಲ್ಲಿಸಿರುವವರಿಗೆ ತಿಳಿವಳಿಕೆ ನೋಟಿಸ್ ನೀಡಿದ್ದು, ಕರೊನಾ ಸಂದರ್ಭದಲ್ಲಿ ಅಂಗವಿಕಲರನ್ನು ಬಲವಂತವಾಗಿ ಕರೆಸಿಕೊಳ್ಳಲಾಗುತ್ತಿದೆ. ಹಾಜರಾಗದಿದ್ದರೆ ಕಡತ ವಜಾ ಮಾಡುವ ಬೆದರಿಕೆ ಹಾಕಲಾಗಿದೆ.
ಗ್ರಾಮಗಳಲ್ಲಿಯೇ ಕಂದಾಯ ಇಲಾಖೆ ಸಿಬ್ಬಂದಿ ಇದ್ದು, ಅವರ ಮೂಲಕ ದಾಖಲೆಗಳನ್ನು ತರಿಸಿಕೊಳ್ಳಲು ಅವಕಾಶವಿದ್ದರೂ ಉದ್ದೇಶಪೂರ್ವಕವಾಗಿ ವಿವಿಧ ಪಿಂಚಣಿ ಬಯಸಿದವರಿಗೆ ತಿಳಿವಳಿಕೆ ನೋಟಿಸ್ ನೀಡಿರುವುದು ಅನುಮಾನ ಮೂಡಿಸಿದೆ. ತಾಲೂಕು ಕಚೇರಿಯಲ್ಲಿ ಕಳೆದೊಂದು ತಿಂಗಳಿನಲ್ಲಿಯೇ ವಿವಿಧ ಪಿಂಚಣಿಗಾಗಿ 150 ಅರ್ಜಿ ಸಲ್ಲಿಕೆಯಾಗಿದ್ದರೂ ವಿಲೇವಾರಿ ಕುಂಟುತ್ತಾ ಸಾಗಿದೆ. ಇವರು ಕರೆದ ದಿನ ಕಚೇರಿಗೆ ಬಂದಿಲ್ಲ ಎಂಬ ನೆಪಮಾಡಿ 36 ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಇನ್ನುಳಿದ 70 ಅರ್ಜಿ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಮಡಿವಾಳ ಜಾತಿಗೆ ಒಕ್ಕಲಿಗ ಪ್ರಮಾಣಪತ್ರ: ವಿದ್ಯಾಭ್ಯಾಸಕ್ಕಾಗಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿರುವ ಲಕ್ಷ್ಮೀದೇವಿ ಎಂಬ ವಿದ್ಯಾರ್ಥಿನಿಯ ಪ್ರಮಾಣಪತ್ರದಲ್ಲಿ ಜಾತಿಯ ಹೆಸರನ್ನೇ ತಪ್ಪಾಗಿ ನಮೂದಿಸಲಾಗಿದೆ. ಈ ಬಗ್ಗೆ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಮೂರು ತಿಂಗಳಿನಿಂದ ಕಚೇರಿಗೆ ಅಲೆಯುತ್ತಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇಂತಹ ನೂರಾರು ಸಮಸ್ಯೆಗಳು ಪಾವಗಡ ತಾಲೂಕು ಕಚೇರಿಯಲ್ಲಿದ್ದು, ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಕಿರಿಕಿರಿ ಮಾಡಿಕೊಳ್ಳುವುದು ನಡೆಯುತ್ತಲೇ ಇದೆ. ಈ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ ಜನಸ್ನೇಹಿ ವಾತಾವರಣ ನಿರ್ಮಿಸಿಕೊಡುವ ತುರ್ತು ಅಗತ್ಯವಿದೆ.
ಹಾಜರಾಗದಿದ್ದರೆ ಕಡತ ವಜಾ ಬೆದರಿಕೆ!: ನೋಟಿಸ್ ನೀಡಲು ಅವಕಾಶವಿಲ್ಲದಿದ್ದರೂ ಅರ್ಜಿ ಸಲ್ಲಿಸಿರುವವರಿಗೆ ಗ್ರೇಡ್-2 ತಹಸೀಲ್ದಾರ್ ನೀಡಿರುವ ತಿಳಿವಳಿಕೆ ನೋಟಿಸ್ ನಿಯಮಬಾಹಿರವಾಗಿದೆ. ಹಾಗಿದ್ದರೂ ಅಜಿರ್ದಾರರನ್ನು ಕಚೇರಿಗೆ ಬಲವಂತದಿಂದ ಕರೆಸಿಕೊಳ್ಳುವ ಉದ್ದೇಶದ ಹಿಂದೆ ಹಣ ಕೀಳುವ ದಂಧೆಯೂ ಇದೆ ಎಂಬ ಮಾತು ಕೇಳಿಬಂದಿದೆ. ಫಲಾನುಭವಿ ಖುದ್ದು ಹಾಜರಾಗದಿದ್ದರೆ ಕಡತವನ್ನು ವಜಾಗೊಳಿಸುವ ಬೆದರಿಕೆ ಕೂಡ ನೋಟಿಸ್ನಲ್ಲಿಯೇ ಇದೆ. ಗುರುವಾರ ಪಾವಗಡ ಕಚೇರಿಗೆ ಆಗಮಿಸಿದ್ದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಅವರಿಗೆ ಈ ನೋಟಿಸ್ ಬಗ್ಗೆ ಗೊತ್ತಾಗಿ, ಸಂಬಂಧಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿಯೇ ಒಂದು ಕಾನೂನು ಜಾರಿಯಲ್ಲಿದ್ದರೆ ಪಾವಗಡ ತಹಸೀಲ್ದಾರ್ ಕಚೇರಿಯಲ್ಲಿ ಪ್ರತ್ಯೇಕ ಕಾನೂನು ಜಾರಿಯಲ್ಲಿದೆ. ನಾನು ಎಲ್ಲ ದಾಖಲೆಗಳನ್ನು ನೀಡಿ ಪಿಂಚಣಿಗೆ ಅರ್ಜಿ ಸಲ್ಲಿಸಿದ್ದರೂ ಜ.20ರಂದು ಖುದ್ದು ಹಾಜರಾಗಲು ನೋಟಿಸ್ ನೀಡಿದ್ದರು. ಕರೊನಾ ಭಯದಲ್ಲಿಯೇ ಬಂದು ಮತ್ತೊಮ್ಮೆ ಕೈಮುಗಿದು ಕೇಳಿಕೊಂಡಿದ್ದೇನೆ.
| ನಾಗರಾಜು ಅಂಗವಿಕಲ, ಚಿತ್ತಗಾನಹಳ್ಳಿ
ಅಂಗವಿಕಲ, ಸಂಧ್ಯಾಸುರಕ್ಷಾ, ವಿಧವಾ, ವೃದ್ಧಾಪ್ಯ ಪಿಂಚಣಿ ಕೋರಿ ಅರ್ಜಿ ಸಲ್ಲಿಸಿರುವ ತಾಲೂಕಿನ ನೂರಾರು ಫಲಾನುಭವಿಗಳ ಮನೆಗೆ ಕಾರ್ಯಾದೇಶ ತಲುಪಿಸಲು ಸರ್ಕಾರದ ಸೂಚನೆಯಿದೆ. ನಿಯಮ ಬಾಹಿರವಾಗಿ ನೋಟಿಸ್ ನೀಡಿರುವ ಅಧಿಕಾರಿಗೆ ಎಚ್ಚರಿಕೆ ನೀಡಿದ್ದೇನೆ.
| ಸೋಮಪ್ಪ ಕಡಗದಾಳು ಮಧುಗಿರಿ ಎಸಿ