ರಾಯಚೂರು: ದೇಶದಲ್ಲಿ ಅಲೆಮಾರಿ ಜನಾಂಗವಾಗಿರುವ ಕುರುಬ ಸಮಾಜಕ್ಕೆ ರಕ್ಷಣೆ ಅಗತ್ಯವಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿರುವ ಸಮಾಜವನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಶರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಎಚ್.ವಿಶ್ವನಾಥ ತಿಳಿಸಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶರ್ಡ್ ಇಂಡಿಯಾ ಇಂಟರ್‌ನ್ಯಾಷನಲ್‌ನ ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಪದಾಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸತತ ದೇಶಾದ್ಯಂತ ಸುತ್ತಿ ಸಂಸ್ಥೆಯನ್ನು ಸಂಘಟಿಸಲಾಗಿದೆ ಎಂದರು.
ಕುರಿ ಸಾಗಣೆ ಕೇವಲ ಪಶು ಸಂಗೋಪನೆ ಮಾತ್ರವಾಗಿರದೆ ಅದೊಂದು ಉದ್ಯಮವಾಗಿದೆ. ಆದರೆ ಸಮಾಜದ ಯಾವುದೇ ಶಾಸಕರಿಗೆ ಕುರಿ, ಕಂಬಳಿ ಮತ್ತು ಸಮಾಜದ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ. ಸಮಾಜದ ಒಗ್ಗಟ್ಟಿನಿಂದಾಗಿ ಇಂದು ಕಾಂಗ್ರೆಸ್ ಉಳಿದುಕೊಂಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಕಾರಣವಾಗಿದೆ ಎಂದು ಹೇಳಿದರು.
ಸಂಸ್ಥೆ ರಾಜ್ಯಾಧ್ಯಕ್ಷ ಸಿ.ಎಂ.ನಾಗರಾಜ ಮಾತನಾಡಿ, ಸಮಾಜವನ್ನು ಮತ್ತಷ್ಟು ಪ್ರಬಲ ಶಕ್ತಿಯನ್ನಾಗಿ ಬೆಳೆಸುವ ಅಗತ್ಯವಿದೆ. ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಮಾಜವನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ. ಎಲ್ಲರೂ ಒಗ್ಗೂಡಿಸಿಕೊಂಡು ಮುಂದೆ ಸಾಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸಭೆಯಲ್ಲಿ ಸಮಾಜದ ಗುರುಗಳಾದ ಸಿದ್ದಯ್ಯ ಗುರುವಿನ, ಲಕ್ಷ್ಮಣ ತಾತ, ಸಂಸ್ಥೆ ಪದಾಕಾರಿಗಳಾದ ಪ್ರೇಮಲತಾ, ಮಂಜುಳಾ ನಾಗರಾಜ, ರೂಪಾ ಕೃಷ್ಣಪ್ಪ, ಬಾಬು ಬಿದ್ದಿಮನಿ, ಕೆ.ನಾಗರಾಜ, ಎಂ.ಈರಣ್ಣ ಹಾಗೂ ಮೂರು ಜಿಲ್ಲೆಗಳ ಪದಾಕಾರಿಗಳು ಉಪಸ್ಥಿತರಿದ್ದರು.