ತಿಪಟೂರು: ಒಂದು ದಿನದ ಅಧಿಕಾರಕ್ಕಾಗಿ ನಡೆದ ತಿಪಟೂರು ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಬಿಜೆಪಿ ಸದಸ್ಯೆ ಕಾಂಗ್ರೆಸ್ ಶಾಸಕರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದು ಗಮನ ಸೆಳೆಯಿತು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬುಧವಾರ ನಡೆದಿದೆಯಾದರೂ ಲಿತಾಂಶ ಘೋಷಣೆಗೆ ಹೈಕೋರ್ಟ್ ಆದೇಶದಿಂದ ತಡೆ ಬಿದ್ದಿದೆ. ಅ.30ಕ್ಕೆ ಸದಸ್ಯರ ಅಧಿಕಾರಾವಧಿ ಪೂರ್ಣವಾಗಲಿದ್ದು, ಒಂದು ದಿನ ಅಧಿಕಾರಕ್ಕಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಬಿಜೆಪಿ ಸದಸ್ಯೆ ಅಶ್ವಿನಿ ದೇವರಾಜ್ ಹಾಗೂ ಬಿಜೆಪಿ ಸದಸ್ಯೆ ಡಾ.ಓಹಿಲಾ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
ಅಧ್ಯಕ್ಷ ಸ್ಥಾನಕ್ಕೆ ಹಿಂದಿನ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದ ಬಿಜೆಪಿ ಸದಸ್ಯೆ ಅಶ್ವಿನಿ ದೇವರಾಜ್ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ ಆದೇಶದಲ್ಲಿ ಸದಸ್ಯತ್ವ ಕಳೆದುಕೊಂಡಿದ್ದಾರೆ. ಆದರೆ, ಹೈಕೋರ್ಟ್ನಲ್ಲಿ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ಬುಧವಾರ ನಾಮಪತ್ರ ಸಲ್ಲಿಸಿದ್ದು, ಸೋಜಿಗ ಎನ್ನಿಸಿತು.
ಬಿಜೆಪಿ ಚಿಹ್ನೆಯಲ್ಲಿ ಆಯ್ಕೆಯಾಗಿರುವ ಅಶ್ವಿನಿ ದೇವರಾಜ್ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದು, ಬಿಜೆಪಿ ಸದಸ್ಯರನ್ನು ಕೆರಳಿಸಿದೆ. ಹಾಗಾಗಿ, ಅಧಿಕಾರ ಒಂದು ದಿನಕ್ಕಷ್ಟೇ ಇದ್ದರೂ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು.
31 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 9 ಹಾಗೂ ಜೆಡಿಎಸ್ 5 ಸದಸ್ಯ ಬಲ ಹೊಂದಿದ್ದು, 6 ಪಕ್ಷೇತರ ಸದಸ್ಯರು, ಶಾಸಕ, ಸಂಸದ ಮತಗಳು ಸೇರಿ 33 ಮತಗಳಿದ್ದವು. ಸಂಸದ ವಿ.ಸೋಮಣ್ಣ ಚುನಾವಣೆಯಲ್ಲಿ ಗೈರಾಗಿದ್ದರಿಂದ 32 ಮತಗಳು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಲಾವಣೆಯಾಗಿದ್ದು, ಲಿತಾಂಶ ಕುತೂಹಲ ಮೂಡಿಸಿದೆ.
ಚುನಾವಣಾಧಿಕಾರಿಯಾಗಿ ತಿಪಟೂರು ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಕಾರ್ಯನಿರ್ವಹಿಸಿದರು. ಕೈ ಎತ್ತುವ ಮೂಲಕ ಮತ ಚಲಾವಣೆ ನಡೆದಿದ್ದು, ಹೈಕೋರ್ಟ್ ಆದೇಶದಂತೆ ನ್ಯಾಯಾಲಯದಿಂದ ಚುನಾವಣೆಗೆ ಮತದಾನ ಮಾಡಲು ಅವಕಾಶ ಪಡೆದಿರುವ ನಾಲ್ವರು ಅನರ್ಹ ಸದಸ್ಯರ ಮತ ಗೌಪ್ಯವಾಗಿಟ್ಟು, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಲಿತಾಂಶ ಸಲ್ಲಿಸಲಾಗಿದ್ದು, ಮತಗಳನ್ನು ಪರಿಶೀಲಿಸಿ ಅಧ್ಯಕ್ಷರ ಆಯ್ಕೆ ಘೋಷಣೆ ನಡೆಯಲಿದೆ.
ಹಿಂದಿನ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿದ್ದ ಅಶ್ವಿನಿ ದೇವರಾಜ್ ಮತದಾನ ಮಾಡಲು ನ್ಯಾಯಾಲಯದಿಂದ ಆದೇಶ ಪಡೆದಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಅವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದಕ್ಕೆ ನಾವು ಚುನಾವಣಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದರೂ ಪರಿಗಣಿಸದೆ ಸ್ಪರ್ಧೆಗೆ ಅವಕಾಶ ಅವಕಾಶ ನೀಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ.
> ಡಾ.ಎಂ.ಎಸ್.ಓಹಿಲಾ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ