ಬೀರೂರು: ಪಟ್ಟಣದಲ್ಲಿ ಅಡಕೆ ಕೊಯ್ಲು ಆರಂಭವಾದರೆ ರಸ್ತೆ ಅಕ್ಕಪಕ್ಕ ಅಡಕೆ ಸಿಪ್ಪೆಯದ್ದೇ ಸದ್ದು, ಹಗಲು ವೇಳೆ ಅಡಕೆ ಕೆಲಸದಲ್ಲಿ ನಿರತರಾಗುವ ಚೇಣಿದಾರರು ರಾತ್ರಿ ವೇಳೆ ತಮ್ಮ ವಾಹನಗಳಲ್ಲಿ ಅಡಕೆ ಸಿಪ್ಪೆಗಳನ್ನು ತಂದು ಮುಖ್ಯರಸ್ತೆ ಅಕ್ಕಪಕ್ಕದಲ್ಲಿ ಸುರಿಯುತ್ತಿದ್ದರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.
ಜೂನ್ ತಿಂಗಳಿನಿಂದ ಆರಂಭವಾಗುವ ಅಡಕೆ ಕೊಯ್ಲು ಜನವರಿ ಅಂತ್ಯದವರೆಗೂ ನಡೆಯುತ್ತಿದೆ. ಮಳೆ, ಹಬ್ಬ ಹರಿದಿನಗಳನ್ನು ಹೊರತುಪಡಿಸಿದರೆ ಉಳಿದಂತೆ ಜೂನ್‌ನಿಂದ ಜನವರಿವರಗೆ ಚೇಣಿದಾರರು ಉತ್ಪಾದನೆಯಾಗುವ ಅಡಕೆ ಸಿಪ್ಪೆಯನ್ನು ಸೂಕ್ತವಾಗಿ ವಿಲೇವಾರಿ ಮಾಡುತ್ತಿಲ್ಲ. ಸಿಪ್ಪೆಯನ್ನು ಮುಖ್ಯರಸ್ತೆಗಳಲ್ಲಿ ಸುರಿದು ಅದು ಒಣಗಿದಾಗ ಬೆಂಕಿ ಹಚ್ಚುತ್ತಿರುವುದರಿಂದ ಹೊಗೆ ಸಂಪೂರ್ಣವಾಗಿ ರಸ್ತೆಯನ್ನು ಅವರಿಸಿ ವಾಹನ ಸವಾರರಿಗೆ ರಸ್ತೆ ಕಾಣದೆ ಅಪಘಾತಗಳು ಸಂಭವಿಸುತ್ತಿವೆ.
ಪಟ್ಟಣದ ಅಜ್ಜಂಪುರ ರಸ್ತೆ, ಯಗಟಿ ರಸ್ತೆ, ಲಿಂಗದಹಳ್ಳಿ ರಸ್ತೆ, ಕೋಡಿಹಳ್ಳಿ ರಸ್ತೆ ಹಾಗೂ ಕಡೂರು ರಸ್ತೆಯಲ್ಲಿ ಅಡಕೆ ಸಿಪ್ಪೆಗೆ ಬೆಂಕಿ ತಗುಲಿ ಸುತ್ತಲೂ ಹೊಗೆ ಆವರಿಸಿ ಸುತ್ತಮುತ್ತಲ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿವೆ. ಹಸಿಸಿಪ್ಪೆ ಸುರಿದಾಗ ಸಣ್ಣ ಗಾತ್ರದ ಕೀಟಗಳು ಉತ್ಪಾದನೆಯಾಗಿ ಓಡಾಡುವವರ ಕಣ್ಣಿಗೆ ಬಡಿಯುತ್ತಿವೆ. ಪುರಸಭೆ ಲಿಂಗದಹಳ್ಳಿ ರಸ್ತೆಯಲ್ಲಿ ಕಸ ಸುರಿಯುವಂತಿಲ್ಲ ಎಂದು ಬೋರ್ಡ್ ಹಾಕಿಸಿದ್ದು ಬಿಟ್ಟರೆ ಮಾಲಿನ್ಯ ಹಾಳು ಮಾಡುತ್ತಿರುವ ಯಾರ ವಿರುದ್ದವೂ ಕ್ರಮಕೈಗೊಂಡಿಲ್ಲ. ಸಾರ್ವಜನಿಕರಿಗೆ ಅಡಕೆ ಸುರಿದು ಹೋಗುವವರನ್ನು ಗದರಿಸಿ ವಾಪಾಸ್ ಕಳಿಸುವುದನ್ನು ಬಿಟ್ಟರೆ ಇದು ನಿಯಂತ್ರಣಕ್ಕೆ ಬಂದಿಲ್ಲ.