ಪಿರಿಯಾಪಟ್ಟಣ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ವಾಹನ ಸವಾರರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಜತೆಗೆ ವಾಹನಗಳ ಸಂಖ್ಯೆಯೂ ಮಿತಿಮೀರಿದೆ. ರಾಷ್ಟ್ರೀಯ ಹೆದ್ದಾರಿ 275 ರ ಬಿ.ಎಂ.ರಸ್ತೆಯು ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವುದರಿಂದ ಬೆಂಗಳೂರು, ಮೈಸೂರು, ಕೊಡಗು, ಮಂಗಳೂರು, ಕಾಸರಗೋಡು ಮತ್ತಿತರ ಕಡೆಗಳಿಂದ ನಿತ್ಯ ಸಾವಿರಾರು ವಾಹನಗಳು ಈ ರಸ್ತೆ ಮೂಲಕವೇ ಸಾಗುತ್ತಿವೆ.
ಪಟ್ಟಣ ವ್ಯಾಪ್ತಿಯಲ್ಲಿ ಜನಸಂದಣಿ ಮತ್ತು ವಾಹನಗಳ ದಟ್ಟಣೆ ಅರಿತ ಅಂದಿನ ಶಾಸಕ ಕೆ.ಮಹದೇವ್ ಸುಮಾರು ಎರಡು ವರ್ಷಗಳ ಹಿಂದೆ ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ಅನುದಾನದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲು ಕ್ರಮ ಕೈಗೊಂಡಿದ್ದರು. ಇದರಿಂದಾಗಿ ಬಿ.ಎಂ.ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಸಾಧ್ಯವಾಯಿತು. ಅಲ್ಲದೆ ನಾಲ್ಕೂ ದಿಕ್ಕುಗಳಿಂದ ಬಸವೇಶ್ವರ ಸರ್ಕಲ್ ಕಡೆಗೆ ಒಮ್ಮೆಲೇ ಬರುತ್ತಿದ್ದ ವಾಹನಗಳನ್ನು ನಿಯಂತ್ರಿಸಲು ಅನುಕೂಲವಾಗಿತ್ತು.
ಟ್ರಾಫಿಕ್ ಸಿಗ್ನಲ್ ಚಾಲನೆಗೊಂಡು ಎರಡು ತಿಂಗಳು ಯಶಸ್ವಿಯಾಗಿಯೇ ನಡೆಯಿತು. ಬಳಿಕ ಪೊಲೀಸ್ ಇಲಾಖೆಯ ನಿರ್ಲಕ್ಷೃದಿಂದಾಗಿ ಆಗಿಂದಾಗ್ಗೆ ಸಿಗ್ನಲ್ ಸ್ಥಗಿತಗೊಳ್ಳಲು ಶುರುವಾಯಿತು. ಈ ನಡುವೆ ಯುಜಿಡಿ ಕಾಮಗಾರಿಗಾಗಿ ಬಸವೇಶ್ವರ ವೃತ್ತದಲ್ಲಿ ಗುಂಡಿ ತೆಗೆಯುತ್ತಿದ್ದ ಸಂದರ್ಭದಲ್ಲಿ ಟ್ರಾಫಿಕ್ ಸಿಗ್ನಲ್‌ನ ವೈರ್‌ಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಸತತ ಮೂರು ತಿಂಗಳು ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಗಳು ಬಂದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ ಒಲ್ಲದ ಮನಸ್ಸಿನಿಂದಲೇ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಗೆ ಮರು ಚಾಲನೆ ನೀಡಿದ್ದರು.
ಈ ನಡುವೆ ಕೆ.ವೆಂಕಟೇಶ್ ಶಾಸಕರಾಗಿ ಆಯ್ಕೆಯಾಗಿ ಸಚಿವರಾದ ಬಳಿಕ ಒಂದೆರಡು ತಿಂಗಳು ಟ್ರಾಫಿಕ್ ಸಿಗ್ನಲ್ ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಕಳೆದ 10 ತಿಂಗಳಿಂದ ಟ್ರಾಫಿಕ್ ಸಿಗ್ನಲ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಟ್ರಾಫಿಕ್ ಸಿಗ್ನಲ್ ಕೆಟ್ಟು ಹೋದ ಬಳಿಕ ಅಲ್ಲಿ ನಿಂತು ವಾಹನಗಳ ಓಡಾಟವನ್ನು ನಿಯಂತ್ರಿಸಬೇಕಾದ ಪೊಲೀಸರು ಅದು ತಮ್ಮ ಕೆಲಸವಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ನೆಪವೊಡ್ಡಿ ಬರೋಬ್ಬರಿ ಮೂರು ತಿಂಗಳು ಇತ್ತ ತಲೆಯೇ ಹಾಕಿಲ್ಲ.
ಈ ನಡುವೆ ಟ್ರಾಫಿಕ್ ಸಿಗ್ನಲ್ ಇಲ್ಲದ ಪರಿಣಾಮ ವಾಹನಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿವೆ. ಕೆಲವೊಮ್ಮೆ ಪೊಲೀಸರು ಸಂಜೆ ವೇಳೆ ಬಸವೇಶ್ವರ ವೃತ್ತದ ಬಳಿ ತಮ್ಮ ವಾಹನವನ್ನು ನಿಲ್ಲಿಸಿಕೊಂಡು ನಿಂತಿದ್ದರೂ ಸಂಚಾರ ನಿಯಂತ್ರಣ ಮಾಡುವ ಕೆಲಸ ಮಾಡುತ್ತಿಲ್ಲ. ಇನ್ನು ವಾರಾಂತ್ಯದ ದಿನಗಳಲ್ಲಿ ಮೈಸೂರು, ಬೆಂಗಳೂರು ಮತ್ತು ಇತರ ಜಿಲ್ಲೆಗಳಿಂದ ಕೊಡಗಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಈ ರಸ್ತೆಯಲ್ಲಿ ಸಾಗುತ್ತಾರೆ. ಈ ಸಂದರ್ಭದಲ್ಲಿ ಇಲ್ಲಿ ಉಂಟಾಗುವ ವಾಹನಗಳ ದಟ್ಟಣೆಯಿಂದಾಗಿ ಟ್ರಾಫಿಕ್ ಅವ್ಯವಸ್ಥೆಯನ್ನು ಶಪಿಸಿ ಹೋಗುವವರ ಸಂಖ್ಯೆಯೇ ಹೆಚ್ಚು.
ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುವ ನೌಕರರು ಬಸವೇಶ್ವರ ವೃತ್ತದ ಮೂಲಕ ಹಾದುಹೋಗಲು ಹರಸಾಹಸ ಪಡಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಮಾರಣಾಂತಿಕ ಅಪಾಯ ಕಟ್ಟಿಟ್ಟ ಬುತ್ತಿ. ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾದಂತೆ ವಾಹನಗಳ ಪಾಕಿರ್ಂಗ್ ಸಮಸ್ಯೆ ತೀವ್ರವಾಗಿ ಕಾಡತೊಡಗಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ಪ್ರತ್ಯೇಕ ನಿಲ್ದಾಣದ ವ್ಯವಸ್ಥೆ ಇಲ್ಲದಿರುವುದರಿಂದ ಎಲೆಂದರಲ್ಲಿ ವಾಹನಗಳನ್ನು ಸವಾರರು ನಿಲ್ಲಿಸುತ್ತಿದ್ದರೆ, ಇನ್ನು ಸಾರ್ವಜನಿಕರ ಓಡಾಟಕ್ಕೆ ಸೀಮಿತವಾಗಿರಬೇಕಿದ್ದ ಫುಟ್‌ಪಾತ್‌ನಲ್ಲಿ ತಳ್ಳುಗಾಡಿ ವ್ಯಾಪಾರಿಗಳು ತಮ್ಮ ಗಾಡಿಗಳನ್ನು ನಿಲ್ಲಿಸಿಕೊಳ್ಳುವುದರಿಂದ ಸಾರ್ವಜನಿಕರ ಓಡಾಟಕ್ಕೆ ರಸ್ತೆ ಇಲ್ಲವಾಗಿದೆ. ರಸ್ತೆ ಬದಿಯಿಂದ ಫುಟ್‌ಪಾತ್‌ವರೆಗಿನ ಜಾಗ ಸಮರ್ಪಕವಾದ ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡುವುದು ಸವಾಲಿನ ಕೆಲಸವಾಗಿದೆ.
ಮಳೆಗಾಲದಲ್ಲಿ ಮುಖ್ಯ ರಸ್ತೆಗೆ ಬಿದ್ದ ನೀರು ಚರಂಡಿ ಮೂಲಕ ಸರಾಗವಾಗಿ ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಚತುಷ್ಪಥ ರಸ್ತೆ ನಿರ್ಮಾಣಗೊಂಡು 15 ವರ್ಷ ಕಳೆದರೂ ಕೆಲವು ಕಡೆ ಇನ್ನೂ ಚರಂಡಿ ವ್ಯವಸ್ಥಿತವಾಗಿ ನಿರ್ಮಾಣವಾಗಿಲ್ಲ. ನಿಯಮಿತ ವಾಗಿ ಚರಂಡಿಯಲ್ಲಿನ ಕಸ ತೆಗೆಯದಿರುವುದರಿಂದ ಹಲವು ಕಡೆ ಕಸದ ತೊಟ್ಟಿಯಂತಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿರುವ ಚತುಷ್ಪಥ ರಸ್ತೆಯ ಎರಡೂ ಬದಿಯನ್ನು ಚರಂಡಿಯವರಗೆ ವಿಸ್ತರಣೆ ಮಾಡಿ ಡಾಂಬರು ಹಾಕಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಈವರೆಗೂ ಕಾರ್ಯಗತವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಪಟ್ಟಣದ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸ್ಥಗಿತಗೊಂಡು ಒಂದು ವರ್ಷವಾದರೂ ಈವರೆಗೂ ದುರಸ್ತಿಯಾಗದಿರುವುದು ಬೇಸರದ ವಿಷಯ. ವಾಹನಗಳ ದಟ್ಟಣೆಯಿಂದಾಗಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಹೇಳತೀರದಾಗಿದೆ. ಬೆಳಗ್ಗೆ ಮತ್ತು ಸಂಜೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ದೈನಂದಿನ ಕರ್ತವ್ಯಕ್ಕೆ ತೆರಳುವ ನೌಕರರಿಗೆ ಪ್ರತಿ ನಿತ್ಯವೂ ತೊಂದರೆಯಾಗುತ್ತಿದೆ.
ಮಂಜುನಾಥ್ ಸಿಂಗ್, ಪುರಸಭೆ ಮಾಜಿ ಅಧ್ಯಕ್ಷ, ಪಿರಿಯಾಪಟ್ಟಣ
ತಾಂತ್ರಿಕ ಸಮಸ್ಯೆಗಳಿಂದಾಗಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸ್ಥಗಿತಗೊಂಡಿದೆ. ದುರಸ್ತಿ ಮಾಡಿಸುವಂತೆ ಪುರಸಭೆಯವರ ಗಮನಕ್ಕೆ ತಂದಿದ್ದೇವೆ.ಆದರೆ ಟೆಂಡರ್ ಅವಧಿ ಮುಕ್ತಾಯವಾಗಿದೆ ಎಂಬುದು ಪುರಸಭೆ ಅಧಿಕಾರಿಗಳ ಉತ್ತರವಾಗಿದೆ. ನಮ್ಮ ಪೊಲೀಸ್ ಇಲಾಖೆ ವತಿಯಿಂದಲೇ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
ರಾಘವೇಂದ್ರ ಪೊಲೀಸ್ ನಿರೀಕ್ಷಕರು, ಪಿರಿಯಾಪಟ್ಟಣ