ಮುಂಡರಗಿ: ಸಿಂಗಟಾಲೂರ ಏತ ನೀರಾವರಿ ಯೋಜನೆಯ ಮುಖ್ಯಕಾಲುವೆಯು ಒಂದು ತಿಂಗಳ ಹಿಂದೆಯೇ ಕಿತ್ತು ಹೋಗಿದ್ದು, ತುಂಗಭದ್ರಾ ನದಿ ನೀರು ಹರಿಯದಂತಾಗಿದೆ. ಇದರಿಂದ ಕಾಲುವೆಯ ನೀರು ನಂಬಿಕೊಂಡು ಬೆಳೆ ಬೆಳೆದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ತಾಮ್ರಗುಂಡಿ ಸಮೀಪದಲ್ಲಿರುವ ನರಳ ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಿದ್ದು(ಬಾಕ್ಸ್‌ಕಲ್ವಟ್) ಅದರ ಮೇಲೆ ಮುಖ್ಯಕಾಲುವೆ ಹಾದು ಹೋಗಿದೆ. ಒಂದು ತಿಂಗಳ ಹಿಂದೆ ಹಳ್ಳದ ಮೇಲಿನ ಮುಖ್ಯಕಾಲುವೆ ಕುಸಿದು ಬಿದ್ದಿತ್ತು. ರೈತರು ಮಾಹಿತಿ ನೀಡಿ ದುರಸ್ತಿಗೊಳಿಸುವಂತೆ ಪದೇ ಪದೆ ಒತ್ತಡ ಹಾಕಿದ ನಂತರ ಅಧಿಕಾರಿಗಳು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದರು. ದುರಸ್ತಿ ಮಾಡಿ ಹದಿನೈದು ದಿನಗಳಲ್ಲಿ ಮತ್ತೆ ಮುಖ್ಯಕಾಲುವೆ ಕುಸಿದಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ಕಾಲುವೆ ನೀರನ್ನು ನಂಬಿಕೊಂಡು ಮೇವುಂಡಿ, ತಾಮ್ರಗುಂಡಿ ಮತ್ತಿತರರ ಗ್ರಾಮಗಳ ರೈತರು ಜೋಳ, ಸೂರ್ಯಕಾಂತಿ, ಗೋವಿನಜೋಳ, ತರಕಾರಿ ಮತ್ತಿತರ ಬೆಳೆ ಬೆಳೆದಿದ್ದಾರೆ. ಈಗ ನೀರಿಲ್ಲದೇ ಬೆಳೆ ಒಣಗಿ ಹಾಳಾಗುವ ಸ್ಥಿತಿಗೆ ಬಂದಿವೆ. ಮೊದಲೇ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಲುವೆಯಲ್ಲಿ ಹರಿದು ಬರುವ ತುಂಗಭದ್ರಾ ನದಿ ನೀರನ್ನು ನಂಬಿದ ರೈತರು ತೀವ್ರ ಸಂಕಷ್ಟ ಸ್ಥಿತಿಯನ್ನು ಎದುರಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ನಿಷ್ಕಾಳಜಿ ಮಾಡದೇ ತತಕ್ಷಣ ಕಾಲುವೆ ದುರಸ್ತಿಗೊಳಿಸಿ ನೀರು ಹರಿಸುವ ಕೆಲಸ ಮಾಡಲು ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಮುಖ್ಯಕಾಲುವೆ ನೀರನ್ನು ನಂಬಿಕೊಂಡು ವಿವಿಧ ಗ್ರಾಮಗಳ ರೈತರು ಹಲವು ಬೆಳೆಗಳನ್ನು ಬೆಳೆದಿದ್ದಾರೆ. ನೀರು ಹರಿಯದೆ ರೈತರ ಜಮೀನಿನಲ್ಲಿನ ಬೆಳೆಗಳು ಒಣಗುತ್ತಿವೆ. ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಕಾಲುವೆ ದುರಸ್ತಿಗೊಳಿಸಿ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು.I ಶೇಖಣ್ಣ ಆಲೂರು, ಟಿ.ಬಿ.ಮೇಟಿ, ಅಮರೇಶ ಹಿರೇಮಠ ರೈತರು ಮುಖ್ಯಕಾಲುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಕೆಲ ದಿನಗಳಲ್ಲಿ ಕಾಲುವೆಗೆ ನೀರು ಹರಿಸಿದ್ದರಿಂದ ಮತ್ತೆ ಕುಸಿದಿದೆ. ಪುನಃ ತುರ್ತಾಗಿ ಹಳ್ಳಕ್ಕೆ ಕಿರುಸೇತುವೆ ನಿರ್ಮಿಸಿ ಕಾಲುವೆಯ ಕಾಮಗಾರಿ ಕೈಗೊಳ್ಳಲು ಅಂದಾಜು ಪತ್ರಿಕೆ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸದ್ಯಕ್ಕೆ ಕಾಲುವೆಗೆ ಪೈಪ್‌ಗಳನ್ನು ಹಾಕಿ ನೀರು ಹರಿಸಲು ಕ್ರಮ ವಹಿಸಲಾಗುವುದು.I ನಾಗರಾಜ ಎಚ್. ಎಇಇ ಸಿಂಗಟಾಲೂರ ಏತ ನೀರಾವರಿ
9ಎಂಡಿಜಿ1ಎ ಕಾಲುವೆ ಫೋಟೋ ಶೀರ್ಷಿಕೆ:
ಮುಂಡರಗಿ ತಾಲೂಕಿನ ತಾಮ್ರಗುಂಡಿ-ಮೇವುಂಡಿ ನಡುವಿನ ಸಿಂಗಟಾಲೂರ ಏತ ನೀರಾವರಿ ಯೋಜನೆ ಮುಖ್ಯಕಾಲುವೆ ಕುಸಿದಿರುವುದು.
9ಎಂಡಿಜಿ1ಬಿ ಕಾಲುವೆ ಫೋಟೋ ಶೀರ್ಷಿಕೆ:
ಸಿಂಗಟಾಲೂರ ಏತ ನೀರಾವರಿ ಮುಖ್ಯಕಾಲುವೆಗೆ ನೀರು ಹರಿಸದ ಕಾರಣ ಕಾಲುವೆ ಭಾಗದ ಗೋವಿನಜೋಳ ಬೆಳೆ ಒಣಗುತ್ತಿದೆ.