ಜಿಲ್ಲೆ

ಗದ್ದಲ ಗಲಾಟೆಯಿಂದ ಕೂಡಿದ ಗ್ರಾಮ ಸಭೆ

ಮಡಿಕೇರಿ : ಹೆಮ್ಮನೆ ಗ್ರಾಮದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ದುಂಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು. ಅಧಿಕಾರಿಗಳು ಮತ್ತು ಜನಸಾಮಾನ್ಯರ ನಡುವೆ ವಾದ-ವಾಗ್ವಾದಕ್ಕೆ ಕಾರಣವಾಯಿತು.


ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆ ಗದ್ದಲ-ಗಲಾಟೆಯಿಂದ ಕೂಡಿತ್ತು. ತೋಟಗಾರಿಕೆ ಇಲಾಖೆಯಿಂದ ನೀಡುವ ಗಿಡಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಕೇವಲ ಪಂಚಾಯಿತಿ ಸದಸ್ಯರಿಗೆ ಮಾತ್ರ ಇವು ಹೋಗುತ್ತಿವೆ ಎಂದು ಗ್ರಾಮಸ್ಥರಯ ಆರೋಪಿಸಿದರು.
ಈ ವೇಳೆ ಗ್ರಾಪಂ. ಸದಸ್ಯ ದೇವರಾಜ್ ಪದೇ ಪದೆ ಜನರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದರು. ವಾಗ್ವಾದ ತಾರಕ್ಕೇರುತ್ತಿದ್ದಂತೆ ಪೊಲೀಸರ ಮಧ್ಯಪ್ರವೇಶಿಸಿ ತಿಳಿಗೊಳಿಸುವ ಯತ್ನ ಮಾಡಿದರು.


ಪಂಚಾಯತ್‌ರಾಜ್ ಇಲಾಖೆ ಅಧಿಕಾರಿ ಸುಬ್ರಮಣಿ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 2023ರ ಸಾಲಿನಲ್ಲಿ ನಡೆದ ಕಾಮಗಾರಿ ಮತ್ತು ಆಗಬೇಕಿರುವ ಕಾಮಗಾರಿ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ಗ್ರಾಮದ ಯಾವ ಭಾಗಗಳಲ್ಲಿ ಕಾಮಗಾರಿ ನಡೆದಿದೆ ಎಂಬುದರ ವಿವರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು.


ದುಂಡಳ್ಳಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವುದಿಲ್ಲ. ಸಕಾಲದಲ್ಲಿ ಪಡಿತರ ವಿತರಣೆಯಾಗುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯೆಸಿದ ಯಶಸ್ವಿನಿ ಈ ಸಂಬಂಧನ ನ್ಯಾಯಬೆಲೆ ಅಂಗಡಿ ನಿರ್ವಹಣೆ ಮಾಡುವವರಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದರು.
ಗೃಹಜೋತಿ ಯೋಜನೆಗೆ ದುಂಡಳ್ಳಿ ವ್ಯಾಪ್ತಿಯಲ್ಲಿ ಶೇ.90 ರಷ್ಟು ಫಲಾನುಭವಿಗಳಾಗಿದ್ದಾರೆ. ಉಳಿದ ಫಲಾನುಭವಿಗಳು ಹೆಸರು ನೋಂದಾಯಿಸಿಕೊಳ್ಳುವಂತೆ ಸೆಸ್ಕಾಂ ಅಭಿಯಂತರ ಸುದೀಪ್ ಮನವಿ ಮಾಡಿದರು.


ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಕಂದಾಯ ಅಧಿಕಾರಿ ಚೈತ್ರಾ ಸಕ್ರಾ ಮಾತನಾಡಿ, ಈಗಾಗಲೆ ಬರ ಪರಿಹಾರದಲ್ಲಿ ಭತ್ತ ಬೆಳೆಗೆ ಅಂಗಿಕಾರ ನೀಡಿದೆ ಉಳಿದಂತೆ ಕಾಫಿ, ಕಾಳುಮೆಣಸು ಬೆಳೆಗೆ ಪರಿಹಾರ ಘೋಷಣೆ ಪ್ರಗತಿಯಲ್ಲಿದೆ ಎಂದರು.


ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗೋಪಿಕಾ, ಗ್ರಾ.ಪಂ. ಸದಸ್ಯರು, ಪಿಡಿಒ ಆಯಿಷಾಬಾನು, ಗ್ರಾ.ಪಂ. ಸಿಬ್ಬಂದಿ ಇದ್ದರು.