ಜಿಲ್ಲೆ

ಐಸಿಸ್​ ಉಗ್ರರ ಜತೆ ನಂಟು: ಮನೆ-ಕಾಲೇಜು ಮೇಲೆ NIA ದಾಳಿ, ಭಟ್ಕಳದಲ್ಲಿ ಇಬ್ಬರು- ತುಮಕೂರಲ್ಲಿ ಒಬ್ಬನ ವಶ

ತುಮಕೂರು/ಉತ್ತರಕನ್ನಡ: ಐಸಿಸ್​ ಉಗ್ರ ಸಂಘಟನೆ ಜತೆ ನಂಟಿನ ಶಂಕೆ ಹಿನ್ನೆಲೆ ತುಮಕೂರಿನ‌ ಮರಳೂರು ದಿಣ್ಣೆ ಮೂಲದ ನಿವಾಸಿ ಮನೆ ಮೇಲೆ ಭಾನುವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಎನ್ಐಎ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲೂ ಶನಿವಾರ ಮಧ್ಯರಾತ್ರಿ ಇಬ್ಬರನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತುಮಕೂರಲ್ಲಿ ದೆಹಲಿ ಹಾಗೂ ಬೆಂಗಳೂರು ಮೂಲದ ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ಮಾಡಿದೆ. ತುಮಕೂರು ಎಚ್​ಎಂಎಸ್​ ಯುನಾನಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೆಡಿಕಲ್​ ವಿದ್ಯಾರ್ಥಿ ತುಮಕೂರಿನ ಮರಳೂರು ದಿಣ್ಣೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಕಾಲೇಜಿನ ಮೇಲೂ ಎನ್​ಐಎ ದಾಳಿ ಮಾಡಿದೆ, ಈ ಕಾಲೇಜು ಮಾಜಿ ಶಾಸಕ ಡಾ.ರಫೀಕ್​ ಅಹ್ಮದ್​ ಅವರ ಒಡೆತನದಲ್ಲಿದೆ. ಎಚ್​ಎಂಎಸ್​ ಸಂಸ್ಥೆಗೆ ಸೇರಿದ ಕಟ್ಟಡವನ್ನು ಬಾಡಿಗೆ ಪಡೆದು ಮುಂಬೈ ಮೂಲದವರು ಕಾಲೇಜು ನಡೆಸುತ್ತಿದ್ದಾರೆ.

ಭಟ್ಕಳದ ಮನೆಯೊಂದರ ಮೇಲೂ ದಾಳಿ ಮಾಡಿರುವ ಎನ್​ಐಎ ಅಧಿಕಾರಿಗಳು ಯುವಕರಿಬ್ಬರನ್ನ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.