ಗೋಕರ್ಣ: ಸೃಷ್ಟಿಯ ಕಾಲಗತಿಯಲ್ಲಿ ಜೀವ ಜಡವಾಗಿ ಚೈತನ್ಯ ಆರಿ ಹೋಗುವುದುಂಟು. ಅದೇ ಜಡಕ್ಕೆ ಮತ್ತೆ ಚೈತನ್ಯ ಉಕ್ಕಿ ಜೀವ ಬರುವುದೂ ಉಂಟು. ಇಲ್ಲಿನ ಪವಿತ್ರ ಅಶೋಕೆ ವರ್ತಮಾನದಲ್ಲಿ ಈ ಎರಡನೆಯ ಕಾಲಘಟ್ಟದಲ್ಲಿದೆ. ಒಂದು ಸಮಯದಲ್ಲಿ ಶಾಪಗ್ರಸ್ತವಾಗಿ ಜಡವಾಗಿದ್ದ ಶ್ರೀಮಠದ ಮೂಲತಾಣ ಅಶೋಕೆ ಇಂದು ಶ್ರೀಮಲ್ಲಿಕಾರ್ಜುನನಿಗೆ ಅರ್ಪಿತವಾದ ಅತಿರುದ್ರ ಮಹಾಸೇವೆ ಮತ್ತು ಖ್ಯಾಪನಾ ಕಾರ್ಯಕ್ರಮದಿಂದ ನವ ಚೈತನ್ಯ ಪಡೆದು ಪುನರುತ್ಥಾನಕ್ಕೆ ಶ್ರೀಕಾರ ಬರೆದಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀಮಠದ ಮೂಲತಾಣ ಅಶೋಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಖ್ಯಾಪನಾ ಧಾರ್ಮಿಕ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಅಶೋಕೆ ಅತ್ಯಂತ ಪೌರಾಣಿಕ ಮಹತ್ವವುಳ್ಳ ಪವಿತ್ರ ಭೂಮಿ. ಸಾಕ್ಷಾತ್ ಪರಶಿವನ ಅವತಾರಿಗಳಾದ ಆದಿಶಂಕರಾಚಾರ್ಯರು ಮೂರು ಬಾರಿ ಭೇಟಿಯಿತ್ತು ಹರಸಿ ಶ್ರೀಮಠವನ್ನು ಸಂಸ್ಥಾಪನೆಗೈದ ಮೂಲನೆಲೆ ಇದು. ಒಂದು ಕಾಲದಲ್ಲಿ ಧರ್ಮಕರ್ಮಗಳ, ಸುವಿದ್ಯಾ ಭರಿತ ಪಂಡಿತೋತ್ತಮರಿಂದ ಒಡಗೂಡಿದ ಅಗ್ರಹಾರ ಮತ್ತು ಆದಿತಪಸ್ವಿಗಳ ಮಹಾ ಸಾಮ್ರಾಜ್ಯವೇ ಇಲ್ಲಿತ್ತು. ಶ್ರೀಮಠದ ಪೂರ್ವಾಚಾರ್ಯರ ಪಾವನ ನೆಲವೀಡು ಇದಾಗಿತ್ತು. ಆದರೆ, ಕಾಲಾಘಾತದಲ್ಲಿ ಇವೆಲ್ಲವೂ ಮರೆಯಾಗಿ ಅಶೋಕೆ ನಿರ್ಜನ ಮತ್ತು ನಿರ್ಜಲ ಪ್ರದೇಶವಾಗುವ ದುರಂತ ಎದುರಾಯಿತು. ಪುಟ್ಟದಾದ ಜೋಪಡಿಯೊಂದರಲ್ಲಿ ಶ್ರೀಮಲ್ಲಿಕಾರ್ಜುನಲಿಂಗ ಮತ್ತು ಶ್ರೀಗಣೇಶ ಮೂರ್ತಿ ಮಾತ್ರ ಉಳಿದಿತ್ತು.
ಅಂದು ಅಶೋಕೆಯಲ್ಲಿ ಶ್ರೀಶಂಕರರಿಂದ ಸ್ಥಾಪಿತವಾಗಿದ್ದ ಶ್ರೀರಘೂತ್ತಮ ಮಠದ ಪುನರುತ್ಥಾನವಾಗಬೇಕು ಎನ್ನಲು ಎರಡು ಕಾರಣಗಳಿವೆ. ಪ್ರಥಮವಾಗಿ ಮೂಲ ಸಂಬಂಧವನ್ನು ಯಾವತ್ತೂ ಕಳೆದುಕೊಳ್ಳಬಾರದು. ಎರಡನೆಯದಾಗಿ ಪ್ರಥಮ ಗುರುವರ್ಯ ಶ್ರೀವಿದ್ಯಾನಂದರಿಗೆ ’ಅತ್ರ ತಿಷ್ಠ ಮುನಿ ಶ್ರೇಷ್ಠ ಗೋಕರ್ಣೇ ಮುನಿ ಸೇವಿತೇ’ ಎಂಬುದಾಗಿ ಶ್ರೀಶಂಕರರ ಆದೇಶ ಪಾಲನೆಯ ಮಹದುದ್ದೇಶ ಅಶೋಕೆಯಲ್ಲಿನ ಮೂಲ ಮಠದ ಪುನರುತ್ಥಾನದ ಹಿಂದಿನ ಪ್ರಬಲ ಕಾರಣವಾಗಿದೆ ಎಂದರು.
ಇಂದಿನ ಸಮಾಜ ಧರ್ಮಪಥದಿಂದ ಚ್ಯುತವಾಗುವ ಅಪಾಯದಲ್ಲಿದೆ. ಕ್ಷಯಿಸುವ ವಿಪತ್ತು ಸಮಾಜವನ್ನು ಕಾಡಿದೆ. ಇಂತಹ ವಿಷಮ ಕಾಲಘಟ್ಟದಲ್ಲಿ ಶ್ರೀಆದಿ ಶಂಕರರಿಂದ ಮೊದಲ್ಗೊಂಡು ಈ ವರೆಗಿನ ಎಲ್ಲ ಪೂರ್ವ ಪೀಠಾಧಿಪತಿಗಳ ಕೃಪೆ ಅತ್ಯವಶ್ಯ. 11 ದಿನ ಪರ್ಯಂತ ಭಕ್ತಿ, ಶ್ರದ್ಧೆಯಿಂದ ಭಕ್ತರು ಸಮರ್ಪಿಸಿದ ಎಲ್ಲ ಸೇವೆಗಳು ಪುನರುತ್ಥಾನಕ್ಕೆ ಶಕ್ತಿದಾಯಕವಾಗುವದಲ್ಲದೆ, ಸೇವಾ ಭಾಗಿಗಳಾದ ಸರ್ವರ ಕಲ್ಯಾಣಕ್ಕೂ ಕಾರಣವಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಅತಿರುದ್ರಾಭಿಷೇಕ ಮಹಾಸಮಿತಿ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಸ್ತಾಪಿಸಿದರು. ಸಂಯೋಜಕ ಕೊಟೇಲು ರಾಮಕೃಷ್ಣ ಭಟ್ಟ ಖ್ಯಾಪನೆ ನಿರ್ವಹಿಸಿದರು. ಸಮಿತಿ ಗೌರವಾಧ್ಯಕ್ಷ ದೇವಶ್ರವ ಶರ್ಮ, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಕೋಶಾಧ್ಯಕ್ಷ ರಮಣ ಭಟ್ಟ ಮುಂಬೈ ಇತರರಿದ್ದರು.
ಆದಿ ಶಂಕರರ ಕೃಪಾ ದೃಷ್ಟಿ ಹೊಂದಿದ್ದ ಅಶೋಕೆಯ ಪತನಕ್ಕೆ ಅಂದಿನ ಗುರುವರ್ಯರಿಗಾದ ವ್ಯಥೆ, ಚಿತ್ತತಾಪ ಕಾರಣ. ಹಿಂದೆ ಇಲ್ಲಿದ್ದ ಗುರುವರ್ಯರು ಹರಸಿ ಅಶೋಕೆಯನ್ನು ಬಿಟ್ಟು ಹೋಗಿರಲಿಲ್ಲ. ಬದಲಿಗೆ ಮನೋತಾಪದ ಶಾಪದಿಂದ ಅವರು ಅಶೋಕೆಯಿಂದ ದೂರಾಗಿದ್ದರು. ಜತೆಗೆ ಶ್ರೀಮಲ್ಲಿಕಾರ್ಜುನನ ಉಪೇಕ್ಷೆಯೂ ಹಿನ್ನೆಲೆಯಾಗಿದ್ದೀತು. ಮೂಲಮಠದ ಮರು ಸ್ಥಾಪನೆಗೆ ಮಲ್ಲಿಕಾರ್ಜುನನಿಗೆ ವಿಶೇಷ ಸೇವೆ ಮತ್ತು ಖ್ಯಾಪನೆಯ ಪಶ್ಚಾತ್ತಾಪದ ಮೂಲಕ ಇವೆಲ್ಲವುಗಳ ಪರಿಮಾರ್ಜನೆ ಮೊದಲಾಗಬೇಕು. ಇದೇ ಹಿನ್ನೆಲೆಯಿಂದ ಮಲ್ಲಿಕಾರ್ಜುನನಿಗೆ ಅತಿರುದ್ರ ಸೇವೆ ಮತ್ತು ಪೂರ್ವಾಚಾರ್ಯರುಗಳಲ್ಲಿ ಕ್ಷಮೆಯನ್ನು ಯಾಚಿಸುವ ಖ್ಯಾಪನೆಯ ಪ್ರಾರ್ಥನೆಯಿಂದ ಮೂಲಮಠ ಪುನರುತ್ಥಾನಕ್ಕೆ ಪೀಠಿಕೆ ಹಾಕಲಾಗಿದೆ ಎಂದು ಶ್ರೀಗಳು ವಿವರಿಸಿದರು.