ಜಿಲ್ಲೆ

ಜಿಲ್ಲಾ ಈಜುಕೊಳಕ್ಕೆ ಹೊಸರೂಪ

ರೇಷ್ಮೆ ನಗರ ಡೆಸ್ಕ್

ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ರೂಫಿಂಗ್, ಮೆಟ್ಟಿಲು ಅಳವಡಿಕೆ ಕಾಮಗಾರಿಗೆ ಚಾಲನೆ

ರಾಮನಗರ : ನಿರ್ವಹಣೆ ಕೊರತೆಯಿಂದಾಗಿ ಉಪಯೋಗಕ್ಕೆ ಬಾರದಂತಾಗಿರುವ ಈಜುಕೊಳಕ್ಕೆ ಸುಂದರ ರೂಪ ನೀಡಲಾಗುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ನಗರದ ರಾಯರದೊಡ್ಡಿ ಜೀಗೇನಹಳ್ಳಿ 27ನೇ ವಾರ್ಡ್‌ನಲ್ಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಈಜುಕೊಳದ ಮೆಟ್ಟಿಲುಗಳ ಮೇಲೆ ರೂಫಿಂಗ್ ಅಳವಡಿಕೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈಜುಕೊಳ ಅಧಿಕಾರಿಗಳ ಸೂಕ್ತ ಸಮರ್ಪಕ ನಿರ್ವಹಣೆಯಿಂದ ದೂರವಾಗಿದೆ. ನಾನು ಜಿಪಂ ಅಧ್ಯಕ್ಷನಾದ ಅವಧಿಯಿಂದಲೂ ಒಂದಲ್ಲ ಒಂದು ನ್ಯೂನತೆಯಲ್ಲಿ ಕಾಣುತ್ತಿದೆ. ಈಜುಕೊಳ ಉತ್ತಮ ರೀತಿಯಲ್ಲಿ ಉಪಯೋಗಕ್ಕೆ ಬಂದಿಲ್ಲ. ಇದಕ್ಕೆ ಒಳ್ಳೆಯ ರೂಪ ಕೊಡಬೇಕಿದೆ. ಇದರಿಂದ ಯುವಕರು ಪ್ರಯೋಜನ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಹಂತ ಹಂತವಾಗಿ ಈಜುಕೊಳಕ್ಕೆ ಕಾಯಕಲ್ಪ ನೀಡಿ ಹೊಸ ರೂಪ ನೀಡಲಾಗುತ್ತದೆ ಎಂದರು.

ಒಂದು ವಾರದಲ್ಲಿ ಈಜುಕೊಳಕ್ಕೆ ಚಾಲನೆ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತಷ್ಟು ವಿಸ್ತಾರ ಮಾಡಿ ಹೆಣ್ಣುಮಕ್ಕಳ ಈಜುಕೊಳ ಪ್ರತ್ಯೇಕವಾಗಿ ನಿರ್ಮಾಣಕ್ಕೆ ಆಲೋಚನೆ ಮಾಡಲಾಗಿದ್ದು, ಅದನ್ನು ಕಾರ್ಯಗತ ಮಾಡಲಾಗುತ್ತದೆ ಎಂದರು.

ಲೋಪ ಕಂಡುಬಂದರೆ ಕ್ರಮ

ಇದೇವೇಳೆ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಅವರನ್ನು ಕರೆದ ಶಾಸಕರು, ಮೆಟ್ಟಿಲುಗಳ ಮೇಲೆ ರೂಫಿಂಗ್ ಅಳವಡಿಕೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಬೆಂಗಳೂರಿನಲ್ಲಿರುವಂತೆ ಸುಂದರ ರೂಪ ಕೊಡಬೇಕು. ಎಲ್ಲಿಯೂ ಲೋಪವಾಗದಂತೆ ಕಾಮಗಾರಿ ನಡೆಸಬೇಕು ಎಂದು ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಒಮ್ಮತದ ಅಭ್ಯರ್ಥಿ

ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯಾರಾಗಬಹುದೆಂದು ಪಕ್ಷದಿಂದ ಒಮ್ಮತದ ತೀರ್ಮಾನ ಆಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಪಕ್ಷ ತೀರ್ಮಾನಿಸುತ್ತದೆ ಎಂದಷ್ಟೇ ಹೇಳಿದರು.

ರಸ್ತೆ ಬೇಕು

ಈಜುಕೊಳ ಕಾಮಗಾರಿ ಭೂಮಿಪೂಜೆಗೆ ಆಗಮಿಸಿದ ವೇಳೆ ಸ್ಥಳೀಯ ನಿವಾಸಿಗಳು ಈ ಬಡಾವಣೆಯಲ್ಲಿ ರಸ್ತೆಗಳು ಸಮರ್ಪಕವಾಗಿಲ್ಲ, ಮಣ್ಣಿನ ರಸ್ತೆಗಳಾಗಿದ್ದು, ಮಳೆಗಾಲದಲ್ಲಿ ಕೆಸರಿನ ರಾಡಿಯಾಗುತ್ತದೆ. ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ರಸ್ತೆ ನಿರ್ಮಾಣ ಮಾಡಿಸಿಕೊಡಿ ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದರು. ಇದಕ್ಕೆ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿ, ರಾಮನಗರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಭಾಗದ ರಸ್ತೆ ಅಭಿವೃದ್ಧಿಯಾಗುತ್ತದೆ ಎಂದು ಭರವಸೆ ನೀಡಿದರು.

ಕೆಎಂಎಫ್ ಮಾಜಿ ಅಧ್ಯಕ್ಷ ಪಿ ನಾಗರಾಜು, ರಾಮನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ಪವಿತ್ರಾ, ವಿಜಯಕುಮಾರಿ, ಸದಸ್ಯರಾದ ಸೋಮಶೇಖರ್, ಐಹಿಷಾ ಬಾನು, ಗಿರಿಜಮ್ಮ, ಅಜ್ಮಥ್, ಮುಖಂಡರಾದ ವಿ.ಎಚ್.ರಾಜು, ಲಕ್ಷ್ಮೀಪತಿ, ಗುರುವೇಗೌಡ, ಎಂ.ರೇವಣ್ಣ, ವೆಂಕಟೇಶ್‌ಮೂರ್ತಿ, ಕ್ರೀಡಾ ಇಲಾಖೆ ಉಪನಿರ್ದೇಶಕಿ ಅನಿತಾ ಇದ್ದರು.