ಜಿಲ್ಲೆ

ಕುರುಂಜಿಗುಡ್ಡೆ ಪಾರ್ಕ್‌ಗೆ ಹೊಸ ರೂಪ

Avinash R

ಸುಳ್ಯ: ನಗರದ ಕುರುಂಜಿಗುಡ್ಡೆ ಪಾರ್ಕ್‌ನತ್ತ ಕೊನೆಗೂ ನ.ಪಂ ಗಮನಹರಿಸಲು ಮುಂದಾಗಿದ್ದು ಕಳೆದೆರಡು ದಿನಗಳಿಂದ ಇಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ಎಸಿ ಸೂಚನೆಯಂತೆ ಸ್ವಚ್ಛತೆ ತ್ಯಾಜ್ಯ ತೆರವು

ನಿರ್ವಹಣಾ ಕೊರತೆಯಿಂದ ನಗರದ ಏಕೈಕ ಪಾರ್ಕ್ ಕುರುಂಜಿಗುಡ್ಡೆ ಸೊರಗುತ್ತಿರುವುದನ್ನು ಮನಗಂಡು ವರದಿ ಪ್ರಕಟಿಸಲಾಗಿತ್ತು. ಜು.25ರಂದು ಸುಳ್ಯಕ್ಕೆ ಬಂದಿದ್ದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಪಾರ್ಕ್‌ಗೆ ಭೇಟಿ ನೀಡಿ, ಅವ್ಯವಸ್ಥೆ ನೋಡಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಪಾರ್ಕ್ ನಿರ್ವಹಣೆಗೆ ಕ್ರಿಯಾ ಯೋಜನೆ ತಯಾರಿಸುವಂತೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದರು.

ಇದರ ಫಲಶ್ರುತಿ ಎಂಬಂತೆ ಕಳೆದೆರಡು ದಿನಗಳಿಂದ ಇಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಪಾರ್ಕ್ ಸುತ್ತಮುತ್ತಲಿನ ಕಸಗಳನ್ನು ಹೆಕ್ಕಿ ತೆಗೆಯಲಾಗಿದೆ. ಅಲ್ಲಲ್ಲಿ ಎಸೆಯಲಾಗಿದ್ದ ಮದ್ಯದ ಬಾಟಲಿ ಮತ್ತಿತರ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ. ನಗರ ಪಂಚಾಯಿತಿ ಈಗಾಗಲೇ ಪಾರ್ಕ್ ಸಂದರ್ಶನದ ಸಮಯ ನಿಗದಿಪಡಿಸಿ ನಾಮಫಲಕ ಅಳವಡಿಸಿದೆ. ಇದೀಗ ಪಾರ್ಕ್‌ಗೆ ಹೊಸ ಕಳೆ ಬಂದಂತಾಗಿದೆ.