ಮುಂಡಗೋಡ: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ವಿಶೇಷವಾದ ಮಾರ್ಗ ಕಂಡು ಹಿಡಿಯುವ ಮೂಲಕ ತಮ್ಮ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ.
ತಾಲೂಕಿನ ರೈತರಿಗೆ ಭತ್ತ ಪ್ರಮುಖ ಬೆಳೆಯಾಗಿದೆ. ಆದರೆ, ಮಳೆಯ ಏರುಪೇರಿನಿಂದ ಕೆಲ ವರ್ಷಗಳಿಂದ ತಾಲೂಕಿನ ರೈತರು ಗೋವಿನಜೋಳವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಈ ಭಾರಿ ತಾಲೂಕಿನಲ್ಲಿ ಐದು ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗಿದೆ.
ಗೋವಿನಜೋಳ ಬೆಳೆಗಾರರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ತಮ್ಮದೆ ಆದ ಮಾರ್ಗ ಕಂಡು ಹಿಡಿದಿದ್ದಾರೆ. ಬೆಳೆ ರಕ್ಷಣೆಗೆ ಗದ್ದೆಯ ಸುತ್ತಲೂ ಬೇಲಿಯನ್ನು ಹಾಕಲಾಗುತ್ತದೆ. ಆ ಬೇಲಿಗೆ ಸೀರೆಗಳನ್ನು ಕಟ್ಟಲಾಗುತ್ತದೆ. ಈ ಸೀರೆಗಳು ಗಾಳಿ ಬೀಸಿದಾಗ ಅಲುಗಾಡುತ್ತವೆ. ಇದರಿಂದಾಗಿ ಗದ್ದೆಗೆ ದಾಳಿ ಮಾಡಲು ಬರುವ ಕಾಡು ಪ್ರಾಣಿಗಳು ಸೀರೆ ಅಲುಗಾಡುವುದನ್ನು ಕಂಡು ಪ್ರಾಣ ಭಯದಿಂದ ಓಡುತ್ತವೆ. ಹೀಗಾಗಿ ಗೋವಿನಜೋಳ ಬೆಳೆಗಾರರು ತಮ್ಮ ಗದ್ದೆಗಳಿಗೆ ಸೀರೆಗಳನ್ನು ಬಳಕೆ ಮಾಡುತ್ತಿದ್ದಾರೆ.
20 ರೂ.ಗೆ ಒಂದು ಸೀರೆ: ಮುಂಡಗೋಡ ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಸಂತೆಯಲ್ಲಿ ಕಳೆಪೆ ಮಟ್ಟದ ಹಾಗೂ ಹರಕು ಸೀರೆಗಳನ್ನು ಇಪ್ಪತ್ತು ರೂ.ಗೆ ಒಂದನ್ನು ಮಾರಾಟ ಮಾಡಲಾಗುತ್ತದೆ. ರೈತರು ಸೀರೆಗಳನ್ನು ಖರೀದಿಸಿ ಗದ್ದೆಯ ಸುತ್ತಲು ಹಾಕುತ್ತಿದ್ದಾರೆ. ಗೋವಿನಜೋಳ ಬೆಳೆ ಬೆಳೆದ ರೈತರು ತೆನೆ ಹಾಕಿದ ನಂತರ ತಮ್ಮ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಗದ್ದೆಯಲ್ಲಿ ಗುಡಿಸಲು ಹಾಕಿಕೊಂಡು ರಾತ್ರಿ ಬೆಳೆ ಕಾವಲು ಕಾಯುತ್ತಿದ್ದರು. ಆದರೆ, ಈ ಸೀರೆ ಬೇಲಿ ಆರಂಭವಾದ ನಂತರ ರಾತ್ರಿ ಗದ್ದೆ ಕಾಯುವುದನ್ನು ಬಿಟ್ಟಿದ್ದಾರೆ. ಅಲ್ಲದೆ ಗದ್ದೆಗೆ ಕಾಡುಪ್ರಾಣಿ ದಾಳಿಯೂ ಕಡಿಮೆಯಾಗಿದೆ.