ಜಿಲ್ಲೆ

ನೀಟ್ ಪರೀಕ್ಷೆ: 20 ನಿಮಿಷ ಮುಂಚೆಯೇ ಉತ್ತರ ಪತ್ರಿಕೆ ವಾಪಸ್ ಪಡೆದ ಮೇಲ್ವಿಚಾರಕ! ಕಾಲೇಜು ಒಳಾಂಗಣದಲ್ಲಿ ಗೊಂದಲ

arunakunigal

ಮಂಡ್ಯ: ಪರೀಕ್ಷಾ ಅವಧಿಗೂ ಮುನ್ನವೇ ವಿದ್ಯಾರ್ಥಿನಿಯಿಂದ ಕೊಠಡಿ ಮೇಲ್ವಿಚಾರಕರು ಒಎಂಆರ್ ಶೀಟ್ ಹಿಂಪಡೆದಿರುವ ಘಟನೆ ಭಾನುವಾರ ಪಾಂಡವಪುರದಲ್ಲಿ ನಡೆದಿದೆ.

ಮಂಡ್ಯದ ನಿವಾಸಿ ಸಾಂಘವಿ ಎಂಬ ವಿದ್ಯಾರ್ಥಿ ಬೆಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಾಂಡವಪುರದ ವಿಜಯ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ನಿಯಮದ ಪ್ರಕಾರ ಪರೀಕ್ಷೆ ಅವಧಿ ಸಂಜೆ 5.20 ನಿಮಿಷದವರೆಗೆ ನಿಗದಿಯಾಗಿತ್ತು. ಇದಕ್ಕೂ ಮುನ್ನವೇ ಅಂದರೆ 5 ಗಂಟೆಗೆ ಪರೀಕ್ಷೆಯ ಒಎಂಆರ್ ಶೀಟ್ ಅನ್ನು ಹಿಂಪಡೆಯಲಾಗಿದೆ ಎಂದು ಆಕೆಯ ಪಾಲಕರು ಆರೋಪಿಸಿದ ಪರಿಣಾಮ ಕಾಲೇಜು ಒಳಾಂಗಣದಲ್ಲಿ ಗೊಂದಲ ಏರ್ಪಟ್ಟಿತ್ತು.

ಪಟ್ಟಣದ ವಿಜಯ ಶಿಕ್ಷಣ ಸಂಸ್ಥೆಯಲ್ಲಿ ತೆರೆಯಲಾಗಿದ್ದ ನೀಟ್ ಪರೀಕ್ಷಾ ಕೇಂದ್ರದಲ್ಲಿ 504 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಈ ಪೈಕಿ 463 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೊಠಡಿ 15ರ ಮೇಲ್ವಿಚಾರಕರಾಗಿದ್ದ ಮಧುಮತಿ ಮತ್ತು ಹೇಮಣ್ಣೇಗೌಡ ಎಂಬುವವರು ಪರೀಕ್ಷಾ ಅವಧಿಗೂ 20 ನಿಮಿಷ ಮುನ್ನವೇ ವಿದ್ಯಾರ್ಥಿಯಿಂದ ಪರೀಕ್ಷಾ ಪತ್ರಿಕೆ ಹಿಂಪಡೆದ ಕಾರಣ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಿಲ್ಲ ಎಂಬುದು ವಿದ್ಯಾರ್ಥಿ ಮತ್ತು ಪಾಲಕರ ಆರೋಪ. ಈಗ ಮರು ಪರೀಕ್ಷೆ ಕೊಟ್ಟರೂ ನನಗೆ ಬರೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.

ಪರೀಕ್ಷಾ ಸಮಯಕ್ಕಿಂತ 5 ನಿಮಿಷ ಮುಂಚೆ ಒಎಂಆರ್ ಶೀಟ್‌ಗಳನ್ನು ಹಿಂಪಡೆಯಲಾಗಿದೆ. ಇದಕ್ಕೆ ಕಾರಣ ಕೊಠಡಿಯಲ್ಲಿ ಪರೀಕ್ಷೆ ಎದುರಿಸಿದ್ದ ಎಲ್ಲ ವಿದ್ಯಾರ್ಥಿಗಳು ಪತ್ರಿಕೆಯನ್ನು ಸಂಪೂರ್ಣಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಹಿಂಪಡೆಯಲಾಯಿತು ಎಂದು ಮೇಲ್ವಿಚಾರಕಿ ಮಧುಮತಿ ತಿಳಿಸಿದರು.

ಈ ಬಗ್ಗೆ ಪರೀಕ್ಷಾ ಸಹ ಸಂಯೋಜಕಿ ಸೌಮ್ಯಶ್ರೀ ಅವರು ಕೊಠಡಿ ಮೇಲ್ವಿಚಾರಕರಾದ ಮಧುಮತಿ ಮತ್ತು ಹೇಮಣ್ಣೇಗೌಡ ಅವರಿಂದ ಲಿಖಿತ ಪತ್ರ ಪಡೆದಿರುವ ಸಂಯೋಜಕಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಘಟನೆ ಹಿನ್ನೆಲೆಯಲ್ಲಿ ಪೊಲೀಸ್ ಇನ್​ಸ್ಪೆಕ್ಟರ್ ಕೆ.ಪ್ರಭಾಕರ್ ಕಾಲೇಜಿಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.