ಕೆರೂರ: ಜಮಖಂಡಿ ತಾಲೂಕಿನ ಕೊಣ್ಣೂರಿನ ಕರಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ರಾಷ್ಟ್ರಮಟ್ಟದ ಟಗರಿನ ಕಾಳಗ ಸ್ಪರ್ಧೆ ಏರ್ಪಡಿಸಲಾಗಿತ್ತು.
ಟಗರಿನ ಕಾಳಗ ಸ್ಪರ್ಧೆಯಲ್ಲಿ ಸಮೀಪದ ಹಿರೇಮುಚ್ಚಳಗುಡ್ಡ ಗ್ರಾಮದ ಬಸಪ್ಪ ದಳವಾಯಿ ಎಂಬುವವರ ಸೈರಾ ಟ್ರಾಜಾ ಟಗರು ಸ್ಪರ್ಧೆ ಗೆದ್ದು ಪ್ರಥಮ ಬಹುಮಾನದ 7 ಲಕ್ಷ ರೂ. ಮೌಲ್ಯದ ಮಾರುತಿ ಸುಜಕಿ ಆಲ್ಟೋ ಕಾರನ್ನು ಪಡೆದುಕೊಂಡಿತು.
ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಟಗರಿನ ಕಾಳಗದಲ್ಲಿ ಅಂದಾಜು 92 ಟಗರುಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಟಗರಿನ ಕಾಳಗಕ್ಕೆ ಯಾವುದೇ ತರಬೇತಿ ನೀಡಿಲ್ಲ, ಟಗರುಗಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಿ ಶಕ್ತಿ ಹೆಚ್ಚಿಸಲಾಗುವುದು. ಪಂಧ್ಯದಲ್ಲಿ ಅವುಗಳ ಶಕ್ತಿಯೇ ನಿರ್ಣಾಯಕವಾಗಿರುತ್ತದೆ ಎಂದು ಟಗರಿನ ಮಾಲೀಕರು ತಿಳಿಸಿದರು.
ಪ್ರಥಮ ಸ್ಥಾನ ಪಡೆದ ಟಗರನ್ನು ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.