ಜಿಲ್ಲೆ

ಹೆಣ್ಣು ಬಳೆ ಹಾಕುವುದು ಅಬಲೆ ಸಂಕೇತವೇ? ಶಾಸಕ ತನ್ವೀರ್​ಗೆ ಪ್ರತಾಪ್​ ಸಿಂಹ ಹಿಗ್ಗಾಮುಗ್ಗಾ ತರಾಟೆ

ಮೈಸೂರು: ಬಳೆ ಅಂದರೆ ಅಬಲೆ ಸಂಕೇತನಾ ನಿಮ್ಗೆ? ನೀವು ಪ್ರೀತಿಸುವ ಹೈದರಾಲಿಯ ಸೈನಿಕರನ್ನು ಹೊಡೆದಿದ್ದು ಒನಕೆ ಓಬವ್ವ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದು ಕಿತ್ತೂರು ಚೆನ್ನಮ್ಮ. ವೀರ ವನಿತೆ ಅಬ್ಬಕ್ಕನ ಸಾಹಸ ನಮಗೆ ಆದರ್ಶ. ನಾವು ಮಹಿಳೆಯನ್ನು ಆರಾಧಿಸುತ್ತೇವೆ. ತಾಯಿ ಚಾಮುಂಡಿ, ಭುವನೇಶ್ವರಿ ಕೂಡ ಹೆಣ್ಣು. ಪೌರುಷ ತೋರಿಸಲು ಹೆಣ್ಣನ್ನು ತುಚ್ಚವಾಗಿ ನೋಡಬೇಡಿ.ನಮ‌್ಮ ಧರ್ಮದಲ್ಲಿ ಹೆಣ್ಣಿಗೆ ಪೂಜ್ಯನೀಯ ಗೌರವದ ಸ್ಥಾನವಿದೆ. ಅಂತಹ ಹೆಣ್ಣು ಹಾಕಿಕೊಳ್ಳುವ ಬಳೆಯನ್ನು ಅಬಲೆಯ ಸಂಕೇತ ಎನ್ನಬೇಡಿ ಎಂದು ಶಾಸಕ ತನ್ವೀರ್ ಸೇಠ್ ವಿರುದ್ಧ ಸಂಸದ ಪ್ರತಾಪ್​ ಸಿಂಹ ಕಿಡಿಕಾರಿದ್ದಾರೆ.

ನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ದೇಗುಲಗಳ ತೆರವು ಕಾರ್ಯಾಚರಣೆ ವಿವಾದ ತಾರಕಕ್ಕೇರಿದ್ದು, ಸಂಸದ ಪ್ರತಾಪ್​ ಸಿಂಹ ಮತ್ತು ಶಾಸಕ ತನ್ವೀರ್ ಸೇಠ್ ನಡುವೆ ವಾಕ್ಸಮರ ಮುಂದುವರಿದಿದೆ. ಈ ಕುರಿತು ವಿಚಾರವಾಗಿ ಭಾನುವಾರ ನಗರದ 101 ಗಣಪತಿ ದೇವಸ್ಥಾನದ ಬಳಿ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್​ ಸಿಂಹ, ತನ್ವೀರ್ ಸೇಠ್ ಇತರೆ ಅಲ್ಪಸಂಖ್ಯಾತ ನಾಯಕರ ರೀತಿ ಅಲ್ಲ ಅಂದುಕೊಂಡಿದ್ದೆ. ಅವರಿಂದ ನಾನು ಇಂಥ ಮಾತು ನಿರೀಕ್ಷಿಸಿರಲಿಲ್ಲ ಎಂದರು.

ದೇಗುಲಗಳ ತೆರವಿಗೆ ವಿರೋಧಿಸುತ್ತಿರುವ ಸಂಸದರು, ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗೆ ವಾರ್ನಿಂಗ್​ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ತನ್ವೀರ್​, ಸುಪ್ರೀಂ ಕೋರ್ಟಿನ ತೀರ್ಪಿನಂತೆ ನಡೆಯುತ್ತಿರುವ ಅನಧಿಕೃತ ಧಾರ್ಮಿಕ ಕಟ್ಟಡಗಲ ತೆರವು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸುವ ನೆಪದಲ್ಲಿ ಸಂಸದ ಪ್ರತಾಪ್​ ಸಿಂಹ ಕೋಮು ದ್ವೇಷ ಬಿತ್ತುದ್ದಿದ್ದಾರೆ. ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿದ್ರೆ ನಾವ್ಯಾರೂ ಬಳೆ ತೊಟ್ಟು ಕೂತಿಲ್ಲ ಎಂದಿದ್ದರು. ಈ ಕುರಿತು ಇಂದು ಪ್ರತಿಕ್ರಿಯಿಸಿದ ಸಂಸದರು, ತನ್ವೀರ್ ಸೇಠ್ ಇತರೆ ಅಲ್ಪಸಂಖ್ಯಾತ ನಾಯಕರ ರೀತಿ ಅಲ್ಲ ಅಂದುಕೊಂಡಿದ್ದೆ. ಅವರಿಂದ ನಾನು ಇಂಥ ಮಾತು ನಿರೀಕ್ಷಿಸಿರಲಿಲ್ಲ ಎಂದರು.