ಜಿಲ್ಲೆ

ಕೆಆರ್​ಎಸ್​ಗೆ ಸರ್​ ಎಂ.ವಿಶ್ವೇಶ್ವರಯ್ಯರ ಮರಿಮೊಮ್ಮಗ ಭೇಟಿ: ಕುಟುಂಬ ಸಮೇತ ಜಲವೈಭವ ವೀಕ್ಷಣೆ

ಕೆ.ಆರ್​.ಸಾಗರ: ಸರ್​ ಎಂ.ವಿಶ್ವೇಶ್ವರಯ್ಯ ಅವರ ತಮ್ಮನ ಮರಿಮೊಮ್ಮಗ ಸತೀಶ್​ ಮೋಕ್ಷ ಗುಂಡಂ ಮತ್ತು ಕುಟುಂಬ ಕೃಷ್ಣರಾಜಸಾಗರ ಅಣೆಕಟ್ಟೆಗೆ ಭೇಟಿ ನೀಡಿ ಜಲವೈಭವವನ್ನು ಕಣ್ತುಂಬಿಕೊಂಡಿತು.

ಸತೀಶ್​ ಮೋಕ್ಷ ಗುಂಡಂ ಅವರು ಪತ್ನಿ ಲಕ್ಷ್ಮಮ್ಮ ಹಾಗೂ ಪುತ್ರಿ ದಿವ್ಯಾ ಜತೆಗೂಡಿ ಅಣೆಕಟ್ಟೆಯ ಗೇಟುಗಳು, ಸರ್​ ಎಂ.ವಿ. ನಾಲೆ, ಹಿನ್ನೀರು, ಬೃಂದಾವನವನ್ನು ಸೋಮವಾರ ವೀಕ್ಷಿಸಿದರು. ಅಣೆಕಟ್ಟೆ ಮತ್ತು ಗೇಟುಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಕಾವೇರಿ ನೀರಾವರಿ ನಿಗಮ ಸಹಾಯಕ ಇಂಜಿನಿಯರ್​ ಮಾನಸ ಅವರು ಪ್ರಸ್ತುತ ಅಣೆಕಟ್ಟೆ ಕುರಿತು ಮಾಹಿತಿ ನೀಡಿದರು.

ಸತೀಶ್​ ಮೋಕ್ಷ ಗುಂಡಂ ಮಾತನಾಡಿ, ಈ ಅಣೆಕಟ್ಟೆ ಕಟ್ಟಲು ಮೈಸೂರು ಮಹಾರಾಜರ ಕೊಡುಗೆ ಅನನ್ಯ. ನಮ್ಮ ಮುತ್ತಾತ ಸರ್​ ಎಂ.ವಿ. ಅವರ ತಂತ್ರಜ್ಞಾನದ ಕೊಡುಗೆ ಕೂಡ ಸ್ಮರಣೀಯ. ಮಹಾರಾಜರ ಶ್ರಮ ಮತ್ತು ಸರ್​ಎಂವಿ ಅವರ ಜ್ಞಾನದಿಂದ ಈ ಅಣೆಕಟ್ಟೆ ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಆದ್ದರಿಂದ ಇಲ್ಲಿ ಅವರ ಪ್ರತಿಮೆ ನಿರ್ಮಿಸಬೇಕು. ಈ ಬಗ್ಗೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದರು.

ಕಿರಿಯ ಇಂಜಿನಿಯರ್​ಗಳಾದ ಗಣೇಶ್​, ಅಭಿಲಾಷ್​, ಸರ್ಕಾರಿ ನೌಕರರ ಸಂದ ಕೆ.ಆರ್​.ಸಾಗರ ಯೋಜನಾ ಘಟಕದ ಅಧ್ಯಕ್ಷ ಶಿವಪ್ಪ ಇದ್ದರು.