ಜಿಲ್ಲೆ

ಪ್ರೇಕ್ಷಕರನ್ನು ತಣಿಸಿದ ಸಂಗೀತ ಉತ್ಸವ

ಮೈಸೂರು: ‘ಅಜ್ಜನ ಮನೆ ಕಲಾ ಪ್ರಪಂಚ’ ಸಂಸ್ಥೆಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಶಿಷ್ಠ ವಾದ ‘ವರ್ಷಋತು ವೈಭವ’ ಜುಗಲ್ ಬಂದಿ ಸಂಗೀತ ಉತ್ಸವ ಪ್ರೇಕ್ಷಕರ ಮನತಣಿಸಿತು.
ನಗರದ ಶ್ರೀಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದ್ದ ಉತ್ತರಾದಿ-ದಕ್ಷಿಣಾದಿ ಸಂಗೀತ ಲಾಲಿತ್ಯದಲ್ಲಿ ಹಿಂದುಸ್ಥಾನಿ ಹಾಗೂ ಕರ್ನಾಟಕ ಸಂಗೀತದ ಒಟ್ಟು 36 ಕಲಾವಿದರು ಭಾಗವಹಿಸಿದ್ದರು.
ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ವರೆಗೆ ಸತತ 12 ಗಂಟೆ ಕಾಲ ಮನತಣಿಸಿದ ಜುಗಲ್ ಬಂದಿಯಲ್ಲಿ 18 ಕರ್ನಾಟಕ ಹಾಗೂ 18 ಹಿಂದೂಸ್ಥಾನಿಯ ಹಿರಿಯ-ಕಿರಿಯ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಆರು ಪಿಟೀಲು, ಇಬ್ಬರು ಮೃದಂಗ, ನಾಲ್ವರು ಹಾರ‌್ಮೋನಿಯಂ, ಏಳು ತಬಲ, ಒಬ್ಬರು ಸರೋದ್ ವಾದಕರು ಸೇರಿದಂತೆ ಇತರರು ಸಾಥ್ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿದ್ವಾನ್ ಎಚ್.ಕೆ.ನರಸಿಂಹಮೂರ್ತಿ ಅವರು, ಸಂಗೀತ ಪ್ರಿಯರ ಮನತಣಿಸುವ ಈ ಜುಗಲ್ ಬಂದಿ ಕಾರ್ಯಕ್ರಮ ಎಲ್ಲರನ್ನು ಮೆಚ್ಚಿಸಿದೆ. ಅಜ್ಜನ ಮನೆ ಸಂಘಟಕರು ಸಂಗೀತದ ಜೊತೆಗೆ ಸಾಮಾಜಿಕ ಕಾರ್ಯಕ್ರಮದಲ್ಲಿಯೂ ತೊಡಗಿಸಿರುವುದು ಶ್ಲಾಘನೀಯ ಎಂದರು.
ವಿದ್ವಾನ್ ಸುಮಾ ಕೃಷ್ಣಮೂರ್ತಿ, ಕೃಷ್ಣಮೂರ್ತಿ, ಬಿ.ಎಸ್.ರಾಮಾನುಜಮ್, ವೀರಭದ್ರಯ್ಯ ಹಿರೇಮಠ್, ಅಜ್ಜನಮನೆ ಕೃಷ್ಣ, ರಮೇಶ್, ನಾಗೇಶ್ ಇತರರು ಇದ್ದರು.