ಜಿಲ್ಲೆ

ಕಳಪೆ ಆಹಾರ ಪದಾರ್ಥ ವಶಕ್ಕೆ ಪಡೆದ ಪುರಸಭೆ

Mysuru - Desk - Ravikumar

ಗುಂಡ್ಲುಪೇಟೆ: ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿದ್ದ ಕಳಪೆ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿರುವ ಕೆಲವು ದಿನಸಿ ಅಂಗಡಿಯಲ್ಲಿ ಸಾರ್ವಜನಿಕರ ಬಳಕೆ ಮಾಡುವ ಆಹಾರ ಪದಾರ್ಥಗಳು ಕೊಳೆತು ಹೋಗಿರುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆ ಆರೋಗ್ಯ ಶಾಖೆಯ ಆಹಾರ ನಿರೀಕ್ಷಕ ಪರಮೇಶ್, ಪರಿಸರ ಇಂಜಿನಿಯರ್ ಮಹೇಶ್, ಮೇಸ್ತ್ರಿಗಳಾದ ಸಿದ್ದರಾಜು ಹಾಗೂ ಮೂರ್ತಿ ಅವರೊಂದಿಗೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ, ಅವಧಿ ಮುಗಿದ ಹಾಗೂ ಕೊಳೆತ ಆಹಾರ ಪದಾರ್ಥಗಳನ್ನು ಇಟ್ಟಿರುವುದು ಕಂಡುಬಂದಿತು.

ಶುಂಠಿ ಪೇಸ್ಟ್ ಮತ್ತು ಇನ್ನಿತರ ಆಹಾರ ಪದಾರ್ಥಗಳು ಕೊಳೆತು ಹೋಗಿ ದುರ್ವಾಸನೆ ಬೀರುವ ಸ್ಥಿತಿಯಲ್ಲಿತ್ತು. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇಂಥ ಪದಾರ್ಥಗಳನ್ನು ನಾಶ ಮಾಡಲು ಪುರಸಭೆ ವಶಕ್ಕೆ ಪಡೆಯಲಾಯಿತು.

ಪಟ್ಟದ ವ್ಯಾಪ್ತಿಯ ಹೋಟೆಲ್ ಮಾಲೀಕರು ಬೇಕರಿ, ಜ್ಯೂಸ್ ಮಾರಾಟ ಮಾಡುವ ಅಂಗಡಿ, ಬೀದಿಬದಿ ವ್ಯಾಪಾರಿಗಳು, ತಿಂಡಿ ತಿನಿಸುಗಳ ಬರುವ ಅಂಗಡಿಗಳಲ್ಲಿ ಶುಚಿತ್ವವನ್ನು ಕಾಪಾಡುವುದು ಹಾಗೂ ಆಹಾರ ಪದಾರ್ಥಗಳಲ್ಲಿ ಒಳ್ಳೆಯ ಗುಣಮಟ್ಟ ಕಾಪಾಡಿಕೊಳ್ಳಬೇಕು. ತಪ್ಪಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ 1964 ನಿಯಮ 248 ಪ್ರಕಾರ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅಂತಹ ಅಂಗಡಿಯ ಮೇಲೆ ದಾಳಿ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.